ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಭಿವೃದ್ಧಿ ಕಾರ‍್ಯಗಳು ಮತ್ತು ಮಾಹಿತಿ ಕಾರ‍್ಯಕ್ರಮಗಳು ಜನರಿಗೆ ತಲುಪಿದಾಗ ಮಾತ್ರ ಪಂಚಾಯತ್ ಇನ್ನಷ್ಟು ಬೆಳವಣಿಗೆ ಕಾಣಲು ಸಾಧ್ಯವಿದೆ. ಮಾನವ ಅಭಿವೃದ್ಧಿಯಾದರೇ ಮಾತ್ರ ಎಲ್ಲವೂ ಅಭಿವೃದ್ಧಿಯಾದಂತೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದ ಉದ್ಯೋಗ ಖಾತ್ರಿ ಮೂಲಕ ಇಂದು ಗ್ರಾಮಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಮಕ್ಕಳ ಬೇಡಿಕೆಗಳನ್ನು ಆದಷ್ಟು ಈಡೇರಿಸಲಾಗಿದೆ. ನಮ್ಮ ವ್ಯಾಪ್ತಿ ಬಿಟ್ಟು ಸರಕಾರದ ಗಮನಕ್ಕೆ ಹೋಗಬೇಕಾದ ವಿಷಯಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಅನುದಾನ ತಂದು ಕೆಲಸಗಳನ್ನು ಮಾಡಲು ಪಂಚಾಯತ್ ಬದ್ಧವಾಗಿದೆ ಎಂದು ಗೋಪಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಹೇಳಿದರು.
ಗೋಪಾಡಿ ಗ್ರಾಮ ಪಂಚಾಯತ್‌ನ ನೇತೃತ್ವದಲ್ಲಿ ಸುವರ್ಣಸೌಧ ಸಭಾಂಗಣದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅವರು 3380 ಜನಸಂಖ್ಯೆ ಇರುವ ಪುಟ್ಟ ಗ್ರಾಮ ಪಂಚಾಯತ್ ಈ ಗೋಪಾಡಿ ಗ್ರಾಮ ಪಂಚಾಯತ್. ಜನಸಂಖ್ಯೆಗೆ ಅನುಗುಣವಾಗಿ ಸರಕಾರದ ಅನುದಾನಗಳು ಪಂಚಾಯತ್‌ಗಳಿಗೆ ಬರಲಿದೆ. ಕಳೆದ 2 ವರ್ಷಗಳಿಂದ ಯಾವ ಮನೆ ನಿರ್ಮಾಣದ ಯೋಜನೆಗಳು ಸ್ಥಳೀಯಾಡಳಿತಕ್ಕೆ ಬಂದಿರಲಿಲ್ಲ. ಈ ಸಾಲಿನಲ್ಲಿ ನಮಗೆ 30 ಮನೆಗಳು ಬಂದಿದೆ. ಈಗಾಗಲೇ ಈ ಮನೆಗಳಿಗೆ ಬಂದ ಅರ್ಜಿಗಳನ್ನು ಸರಕಾರಕ್ಕೆ ಕಳುಹಿಸಿ ಅನುಮೋದಿಸಲಾದ ಅರ್ಜಿಯ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜ ಪೂಜಾರಿ ಅಧ್ಯಕ್ಷತೆ ವಹಿಸದ್ದರು. ಸದಸ್ಯರಾದ ಗಿರೀಶ್ ಉಪಾಧ್ಯಾಯ, ನೇತ್ರಾವತಿ, ಶಾಂತಾ ಎಸ್.ಎಮ್. ಪ್ರಕಾಶ್ ಗೋಪಾಡಿ, ಸಾವಿತ್ರಿ, ಸುಶೀಲಾ, ಸಂಜೀವಿನಿ ಸಂಘದ ಒಕ್ಕೂಟದ ಅಧ್ಯಕ್ಷೆ ಬೇಬಿ ಗೋಪಾಡಿ, ಪಡುಗೋಪಾಡಿ ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ ಶೆಟ್ಟಿ, ಮೂಡುಗೋಪಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲ ದೇವಿ, ಆಶಾ ಮತ್ತು ಅಂಗನವಾಡಿ ಕಾರ‍್ಯಕರ್ತೆಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ, ಗೋಪಾಡಿ ಉಪ ಆರೋಗ್ಯ ಕೇಂದ್ರದ ಅಧಿಕಾರಿ ಅನ್ನಪೂರ್ಣ, ಉಡುಪಿ ಚೈಲ್ಡ್ ಲೈನ್ ಸಂಸ್ಥೆಯ ಪ್ರಮೋದ್, ನಮ್ಮಭೂಮಿ ಸಂಸ್ಥೆಯ ಸುರೇಶ್ ಎಸ್. ಜಿ ಇಲಾಖಾವಾರು ಮಾಹಿತಿಗಳನ್ನು ನೀಡಿದರು. ಶೇ ೨೫%ರಷ್ಟು ಅನುದಾನದಡಿಯಲ್ಲಿ ಮಂಜೂರಾದ ಚೆಕ್‌ಗಳನ್ನು ಫಲನುಭವಿಗಳಿಗೆ ವಿತರಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಸ್ವಾಗತಿಸಿ ಕಾರ‍್ಯಕ್ರಮ ನಿರೂಪಿಸಿದರು. ಕಾರ‍್ಯದರ್ಶಿ ಹರೀಶ್ಚಂದ್ರ ಆಚಾರ್ಯ ವಂದಿಸಿದರು.
ಮಕ್ಕಳ ಬೇಡಿಕೆಗಳು ಹಾಗೂ ಕೇಳಿ ಬಂದ ದೂರುಗಳು:
ಸ.ಹಿ.ಪ್ರಾ.ಶಾಲೆ ಮೂಡುಗೋಪಾಡಿಯಲ್ಲಿ ಶಾಲಾ ಅವರಣ ಗೋಡೆ ರಚನೆ, ಶಾಶ್ವತ ಕುಡಿಯುವ ನೀರಿಗಾಗಿ ಕ್ರಮ, ಶಾಲಾ ಕೈತೋಟ ನಿರ್ಮಾಣಕ್ಕೆ ಸಹಾಯ, ಬೇಲಿ ನಿರ್ಮಾಣ, ವಾಹನದ ವ್ಯವಸ್ಥೆ, ಬಾಲಕ ಬಾಲಕಿಯರ ಪ್ರತ್ಯೇಕ ಶೌಚಾಲಯ ಕೊಠಡಿಗಳ ನಿರ್ಮಾಣ, ಸ.ಹಿ.ಪ್ರಾ.ಶಾಲೆ ಪಡುಗೋಪಾಡಿಯಲ್ಲಿ ಶಾಲೆಗೆ ಹೋಗುವ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಗಳ ದುರಸ್ತಿ, ಬೀದಿನಾಯಿಗಳ ಕಾಟಕ್ಕೆ ಕಾಡಿವಾಣ, ಶಾಲೆಗೆ ತೆರಳಲು ವಾಹನದ ವ್ಯವಸ್ಥೆ, ಶಾಲೆ ಬಾವಿಯಲ್ಲಿ ನೀರಿನ ಕೊರತೆಯ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಕ್ಕಳು ಮನವಿ ಸಲ್ಲಿಸಿದರು.















