ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸತ್ಯ – ಸುಳ್ಳುಗಳ ದರ್ಶನ ಮಾಡಿಸುವ ಆಧುನಿಕ ರಂಗಭೂಮಿ ನಮ್ಮ ವಿವೇಚನೆ, ಸಂವೇದನೆಯನ್ನು ಇನ್ನಷ್ಟು ಹರಿತಗೊಳಿಸುತ್ತಿದೆ. ನಮ್ಮೊಳಗೆ ಸಹಬಾಳ್ವೆಯ ತುಡಿತ ಹೆಚ್ಚಿದಾಗಲೇ ರಂಗಭೂಮಿಯ ನೈಜ ಆಶಯ ಈಡೇರಿದಂತಾಗುವುದು. ಹಾಗಾಗಿ ರಂಗಭೂಮಿಯ ನಂಟು ಮನುಷ್ಯನಿಗೆ ಒಳ್ಳೆಯದು ಎಂದು ಬ್ರಹ್ಮಾವರ ಎಸ್‌ಎಂಎಸ್ ಶಾಲೆಯ ಪ್ರಾಂಶುಪಾಲರಾದ ಅಭಿಲಾಷ ಹಂದೆ ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ 22ನೇ ವರ್ಷದ ಸಂಭ್ರಮದೊಂದಿಗೆ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಎರಡನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿ ಜೀವಿಗಳು ವಿಕಾಸವಾದಂತೆ ರಂಗಭೂಮಿಯೂ ಸಾಕಷ್ಟು ಬದಲಾಗುತ್ತಾ ಬೆಳೆಯುತ್ತಾ ಬಂದಿದೆ. ನಾಟಕವು ವಿವಿಧ ರಸಗಳ ಮೂಲಕ ಹೃದಯ ಮಟ್ಟುವುದರಿಂದ ನಮ್ಮೊಳಗಿನ ಭಾವಕ್ಕುಂಟಾಗುವ ಉಲ್ಲಾಸದ ಪರಿಣಾಮವೇ ಬೇರೆ ರೀತಿಯದು. ಯಾವುದೇ ಭೇದವಿಲ್ಲದೇ ಬದುಕುವ ರೀತಿಯನ್ನು ಕಲಿಸುವುದು ರಂಗಭೂಮಿಯಿಂದ ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಅಧ್ಯಕ್ಷರಾದ ಬಿ. ರಾಮಕೃಷ್ಣ ಶೇರುಗಾರ ಅವರು ಮಾತನಾಡಿ ಬೈಂದೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಕಲಾ ಚಟುವಟಿಕೆಗಳನ್ನು ನಡೆಸುವುದು ಮಾತ್ರವಲ್ಲದೇ ಮುಂದಿನ ಪೀಳಿಗೆಗೂ ಅದನ್ನು ತಲುಪಿಸುವ ಕಾರ್ಯ ಸುರಭಿ ಸಂಸ್ಥೆಯ ಮೂಲಕ ಆಗುತ್ತಿರುವುದು ಶ್ಲಾಘನಾರ್ಹ. ಇಂತಹ ಸಂಸ್ಥೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
ನೇಪಥ್ಯ ಕಲಾವಿದ ತ್ರಿವಿಕ್ರಮ ರಾವ್ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಉದ್ಯಮಿ ರಾಮು ಮೇಸ್ತ ಶಿರೂರು, ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಶೆಟ್ಟಿ ಹುಂಚನಿ, ಉಪ್ಪುಂದ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮೋಹನ ಪೂಜಾರಿ, ಉಪ್ಪುಂದ ಜೆಸಿಐ ಅಧ್ಯಕ್ಷರಾದ ನಾಗರಾಜ ಪೂಜಾರಿ ಉಬ್ಜೇರಿ ಉಪಸ್ಥಿತರಿದ್ದರು.
ಸುರಭಿ ಸದಸ್ಯ ವೆಂಕಟೇಶ ಡಿ. ಮಯ್ಯಾಡಿ ಪರಿಚಯ ಪತ್ರ ವಾಚಿಸಿದರು. ಸದಸ್ಯರಾದ ಗೋಪಾಲಕೃಷ್ಣ ಜೋಶಿ ಅವರು ಸ್ವಾಗತಿಸಿ, ನಾಗರಾಜ ಬೆಳ್ಕಿ ಬಾಡ ಧನ್ಯವಾದಗೈದರು. ಉಪಾಧ್ಯಕ್ಷರಾದ ಅಬ್ದುಲ್ ರವೂಫ್ ಅವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಂದಗೋಕುಲ ಮಂಗಳೂರು ತಂಡ ಅಭಿನಯಿಸಿ, ಪ್ರಶಾಂತ ಉದ್ಯಾವರ ನಿರ್ದೇಶಿಸಿದ ಉಡಿಯೊಳಗಣ ಕಿಚ್ಚು ನಾಟಕ ಪ್ರದರ್ಶನಗೊಂಡಿತು.