ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನುಷ್ಯನ ವಿಕಾಸದೊಂದಿಗೆ ಜನಪದ, ಜನಪದ ಪ್ರಕಾರಗಳಿಂದ ನಾಟಕ ಬೆಳೆದುಬಂದಿದೆ. ವಿಶ್ವ ರಂಗಭೂಮಿಯನ್ನು ಪರಿಣಾಮಕಾರಿ ಶಿಕ್ಷಣದ ಪ್ರಾಕಾರವೆಂದು ಒಪ್ಪಿಕೊಳ್ಳಲಾಗಿದೆ ಎಂದು ಹೆಗ್ಗೋಡು ಕೆ. ವಿ. ಸುಬ್ಬಣ್ಣ ರಂಗಸಮೂಹದ ಪ್ರಸನ್ನ ಹುಣಸೆಕೊಪ್ಪ ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ 22ನೇ ವರ್ಷದ ಸಂಭ್ರಮದೊಂದಿಗೆ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಹಾಗೂ ವಿಶ್ವ ಅರಂಗಭೂಮಿ ದಿನಾಚರಣೆ ಉದ್ದೇಶಿಸಿ ಮಾತನಾಡಿ ಜನಸಾಮಾನ್ಯರಿಗೆ ಹತ್ತಿರವಾಗಲು ರಂಗಭೂಮಿ ಪರಿಣಾಮಕಾರಿ ಮಾಧ್ಯಮವೆಂಬುದನ್ನು ಪ್ರಭುತ್ವವೂ ಅರಿತಿದೆ. ಹಾಗಾಗಿಯೇ ರಂಗಭೂಮಿಯ ವಿವಿಧ ಪ್ರಾಕಾರಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂದರು.
ನಟ, ಕಂಠದಾನ ಕಲಾವಿದ ಚಂದ್ರಕಾಂತ ಕೊಡಪಾಡಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಟಿ. ಶ್ರೀಧರ ಭಟ್, ಬೈಂದೂರು ರೋಟರಿ ಅದ್ಯಕ್ಷ ಡಾ. ಪ್ರವೀಣ ಶೆಟ್ಟಿ, ಬೈಂದೂರು ಜೆಸಿಐ ಅಧ್ಯಕ್ಷೆ ಸವಿತಾ ದಿನೇಶ್ ಉಪಸ್ಥಿತರಿದ್ದರು.
ಸುರಭಿ ಸದಸ್ಯ ರಾಘವೇಂದ್ರ ಕಾಲ್ತೋಡು ವಿಶ್ವ ರಂಗಭೂಮಿ ದಿನದ ಸಂದೇಶ, ಉದಯ ಗಾಣಿಗ ಬೈಂದೂರು ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಗಾಣಿಗ ತಗ್ಗರ್ಸೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಗಣೇಶ್ ಪೂಜಾರಿ ಬೈಂದೂರು ವಂದಿಸಿದರು. ಸದಸ್ಯ ರಾಘವೇಂದ್ರ ಕೆ. ಪಡುವರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಹೆಗ್ಗೋಡು ಕೆ.ವಿ. ಸುಬ್ಬಣ್ಣ ರಂಗಸಮೂಹ ಅಭಿನಯದ, ಕೆ. ಹಿರಿಯಣ್ಣಯ್ಯ ರಚಿಸಿ, ಪರಶುರಾಮ ವಿ. ಗುಡ್ಡಳ್ಳಿ ನಿರ್ದೇಶಿಸಿದ ಕಂಪೆನಿ ನಾಟಕ ’ದೇವದಾಸಿ’ ಪ್ರದರ್ಶನಗೊಂಡಿತು.