ಚಲನಶೀಲತೆಯಿಂದಲೇ ಲಾವಣ್ಯ ಕಲಾರಂಗದಲ್ಲಿ ಪ್ರಗತಿ ಸಾಧಿಸಿದೆ: ಡಾ. ಗೋವಿಂದ ಬಾಬು ಪೂಜಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು, ಕಲಾ ಪೋಷಕರು ಲಾವಣ್ಯದ ಕೈಹಿಡಿದು ಮುನ್ನೆಡಿಸಿದ ಪರಿಣಾಮ ಈ ನಲವತ್ತೈದು ವಸಂತಗಳಲ್ಲಿ ಲವಲವಿಕೆಯಿಂದಲೇ ಬೆಳೆದುಬಂದಿದೆ. ಲಾವಣ್ಯ, ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.

Call us

Click Here

ಇಲ್ಲಿನ ಶಾರದಾ ವೇದಿಕೆಯಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಾವಣ್ಯ ಬೈಂದೂರು ವತಿಯಿಂದ ಐದು ದಿನಗಳ ಕಾಲ ನಡೆಯುವ ರಂಗಪಂಚಮಿ-2022 ನಾಟಕೋತ್ಸವದ ನಾಲ್ಕನೇ ದಿನದ ಸಭಾಧ್ಯಕ್ಷತೆವಹಿಸಿ ಮಾತನಾಡಿದರು.

ಈ ಸಾಲಿನ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಆಚಾರ್ಯ, ಕಳೆದ ಇಪ್ಪತ್ತು ವರ್ಷಗಳಲ್ಲಿ ಯಕ್ಷಗಾನ ವೃತ್ತಿ ಮೇಳಗಳ ಸಂಖ್ಯೆ ವೃದ್ಧಿಸಿದೆ. ನೂರಾರು ಹಿರಿಯ, ಕಿರಿಯ ಹವ್ಯಾಸಿ ತಂಡಗಳು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡು, ಪ್ರದರ್ಶನ ನೀಡುತ್ತಿವೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಯಕ್ಷಗಾನ ಕಲೆಯಲ್ಲಿ ತೊಡಗಿಸುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಟಿವಿ ವಾಹಿನಿಗಳಲ್ಲಿ ಪ್ರದರ್ಶನವಾಗುತ್ತಿರುವ ಯಕ್ಷಗಾನ ಜನರನ್ನು ಸೆಳೆಯುತ್ತಿವೆ. ಇವು ಯಕ್ಷಗಾನದ ದೃಷ್ಟಿಯಿಂದ ನಡೆಯುತ್ತಿರುವ ಆಶಾದಾಯಕ ಬೆಳವಣಿಗೆ. ಇದನ್ನೆಲ್ಲ ಪರಿಗಣಿಸಿದಾಗ ಕರಾವಳಿ ಮಣ್ಣಿನ ಶ್ರೀಮಂತ ಕಲೆ ಯಕ್ಷಗಾನ ಕುಲಗೆಟ್ಟಿದೆ ಹಾಗೂ ನಶಿಸುತ್ತಿದೆ ಎಂಬ ಕೆಲವರ ಅಭಿಪ್ರಾಯ ಸರಿಯಲ್ಲ ಎಂದ ಅವರು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದರೊಂದಿಗೆ ಕಲಾರಂಗದಲ್ಲಿ ಮುನ್ನೆಲೆಗೆ ತರುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಸುರೇಶ ಬಟವಾಡಿ, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷೆ ಸವಿತಾ ದಿನೇಶ ಗಾಣಿಗ ಶುಭಹಾರೈಸಿದರು. ಲಾವಣ್ಯ ಸ್ಥಾಪಕಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಅಧ್ಯಕ್ಷ ಹರೇಗೋಡು ಉದಯ್ ಆಚಾರ್ಯ, ಕಾರ್ಯದರ್ಶಿ ಮೂರ್ತಿ ಬೈಂದೂರು ಇದ್ದರು. ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ಬಿ. ನಾಯಕ್ ಸ್ವಾಗತಿಸಿ, ದಿನೇಶ್ ಆಚಾರ್ಯ ಚೆಂಪಿ ನಿರೂಪಿಸಿದರು. ಸುರೇಶ ಹುದಾರ್ ವಂದಿಸಿದರು. ನಂತರ ಸಮುದಾಯ ಧಾರವಾಡ ತಂಡದ ಕಲಾವಿದರು ಬುದ್ಧ-ಪ್ರಬುದ್ಧ ನಾಟಕ ಪ್ರದರ್ಶಿಸಿದರು.

Leave a Reply