ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಯಶಸ್ವಿ ಛಾಯಗ್ರಾಹಕನು ತಾನು ಸೆರೆಹಿಡಿಯುವ ಚಿತ್ರದಲ್ಲಿ ಅಗತ್ಯವಿರುವ ಅಂಶವನ್ನು ಅಳವಡಿಸಿ, ಅನಗತ್ಯ ಅಂಶಗಳನ್ನು ಉಪೇಕ್ಷಿಸಿದರೆ ಚಂದದ ಛಾಯಾಚಿತ್ರ ಮೂಡಲು ಸಾಧ್ಯ. ಉತ್ತಮ ಛಾಯಾಚಿತ್ರ, ಬೆಳಕು, ಬಣ್ಣ ಹಾಗೂ ವಸ್ತುಗಳ ವ್ಯವಸ್ಥಿತ ಸಂಯೋಜನೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಹೆಚ್. ಸತೀಶ್ ತಿಳಿಸಿದರು.
ಅವರು ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ‘ಅಭಿವ್ಯಕ್ತಿ’ ಫೋರಂ ವತಿಯಿಂದ ಆಯೋಜಿಸಿದ್ದ ‘ಫೊಟೋಗ್ರಫಿ’ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಛಾಯಾಗ್ರಾಹಣ ಒಂದು ನಿಪುಣ ಕಲೆ. ಕ್ಯಾಮರಾ ಸೆರೆಹಿಡಿಯುವ ಪ್ರತಿಯೊಂದು ಫೋಟೋವು ಒಂದೊಂದು ಸಂದೇಶವನ್ನು ನೀಡುವಂತಿರಬೇಕು. ಉತ್ತಮ ಛಾಯಗ್ರಾಹಕ ಬಣ್ಣ ಹಾಗೂ ಬೆಳಕಿನ ಸಂಯೋಜನೆಯ ಕೌಶಲ್ಯವನ್ನು ಅರಿತಿರಬೇಕು. ಕ್ರಿಯಾತ್ಮಕವಾಗಿ ಚಿತ್ರಗಳನ್ನು ತೆಗೆಯದೇ ಹೋದರೆ ಅವುಗಳನ್ನು ಅಂದಗೊಳಿಸಲು ತಾಂತ್ರಿಕವಾಗಿ ಹೆಣಗಾಡಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪೊರ್ಲು ಸ್ಟುಡಿಯೋದ ಮಾಲಕ ಜಿನೇಶ್ ಪ್ರಸಾದ್ ಹಾಗೂ ವಿಭಾಗ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹನಾ ಫಾತಿಮಾ ನಿರೂಪಿಸಿದರು.