ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆರೋಗ್ಯ ಕ್ಷೇತ್ರದಲ್ಲಿ ಕೊರತೆಗಳ ಪಟ್ಟಿ ದೊಡ್ಡದಿದ್ದು, ಪ್ರಸಕ್ತ ಕಾಲಘಟ್ಟದಲ್ಲಿ ಕೊರತೆಗಳಿಗೆ ಮುಕ್ತಿಕೊಡುವ ಕೆಲಸ ಆಗುತ್ತಿದೆ. ವೈದ್ಯಕೀಯ ಕ್ಷೇತ್ರವಷ್ಟೇ ಅಲ್ಲದೆ ನಾಗರಿಕರಿಗೆ ಆರೋಗ್ಯ ಕಾರ್ಡ್ ನೀಡುವ ಮೂಲಕ ಅಸಹಾಯಕರ ನೆರವಿಗೆ ಬರಲಾಗುತ್ತಿದೆ. ಆಸ್ಪತ್ರೆಯಲ್ಲಿಯೆ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುವ ಮೂಲಕ ಸ್ವಾವಲಂಬಿಯಾಗುತ್ತಿದೆ. ಕರೋನಾ ನಂತರದ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಆಗಿದೆ ಎಂದು ಕೇಂದ್ರ ಕೃಷಿ ಸಚವೆ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಪಂ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ವಿವಿಧ ರೋಟರಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಸಾರ್ವಜನಿಕ ಆಸ್ಪತ್ರೆ ವಠಾರದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಹಿಂಜರಿಕೆ ಬಿಟ್ಟು ಆರೋಗ್ಯ ಸಮಸ್ಯೆ ಬಗ್ಗೆ ವೈದ್ಯರ ಸಲಹೆ ಪಡೆದು ಎಚ್ಚರಿಕೆ ವಹಿಸಬೇಕು. ಖಾಯಿಲೆ ಬರುವುದಕ್ಕಿಂತ ಮುನ್ನಾ ರೋಗದ ಬಗ್ಗೆ ಕಾಳಿಜಿ ವಹಿಸಬೇಕು. ಆರೋಗ್ಯ ಮೇಳದಲ್ಲಿ ಎಲ್ಲಾ ವಿವಿಧ ಖಾಯಿಲೆ ಪರಿಣತ ವೈದ್ಯರು, ವಿವಿಧ ಪರೀಕ್ಷೆಗಳು ಒಂದೇ ಸೂರಿನಡಿ ನಡೆಯುವುದರಿಂದ ಇದರ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ನಾಗರಿಕ ಆಹಾರ ಪೂರೈಕೆ ಉಪಾಧ್ಯಕ್ಷ ಕಿರಣ್ ಕೊಡ್ಗಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿಪಂ ಸಿಇಒ ಡಾ.ನವೀನ್ ಭಟ್ ವೈ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ತಾಲುಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಎ.ಜೆ., ಇದ್ದರು.
ತಾಲೂಕು ಆಸ್ಪತ್ರೆಯ ಹುಲಿಯಪ್ಪ ಗೌಡ ಪ್ರಾರ್ಥಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು. ಸರ್ವೋತ್ತಮ ಪ್ರಶಸ್ತಿ ಪುರಸ್ಕೃತರಾದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಹಾಗೂ ತಾಲುಕು ಆಸ್ಪತ್ರೆ ಕೋವಿಡ್ ಸೆಂಟರ್ ನೋಡೆಲ್ ಅಧಿಕಾರಿ ಡಾ,ನಾಗೇಶ್ ಅವರ ಅಭಿನಂದಿಸಲಾಯಿತು.
ಆಸ್ಪತ್ರೆ ವಾರ್ಡ್ ಪ್ರತಿನಿಧಿಗೆ ಅವಮಾನ:
ಕುಂದಾಪುರ ಪುರಸಭೆ ಆಸ್ಪತ್ರೆ ವಾರ್ಡ್ ಪ್ರತಿನಿಧಿ ದೇವಕಿ ಪಿ.ಸಣ್ಣಯ್ಯ ಆವರ ಕಾರ್ಯಕ್ರಮದಲ್ಲಿ ಗುರುತಿಸಿ, ವೇದಿಕೆಗೆ ಆಹ್ವಾನಿಸದೆ ಇರುವುದು ಅಸಮಧಾನಕ್ಕೆ ಕಾರಣವಾಗಿ, ವಾರ್ಡ್ ಸದಸ್ಯೆಯ ಉದ್ದೇಶಪೂರ್ವಕ ಅವಮಾನಿಸಲಾಗಿದೆ ಎಂದು ಸ್ಥಳೀಯರು ಅಸಮದಾನ ಹೊರ ಹಾಕಿದರು. ಒಂದು ಟರ್ಮ್ ಪುರಸಭೆ ಅಧ್ಯಕ್ಷರಾಗಿ, ಪ್ರಸಕ್ತ ಸದಸ್ಯರಾಗಿರುವ ದೇವಕಿ ಸಣ್ಣಯ್ಯ ಕಾರ್ಯಕ್ರಮಕ್ಕೆ ಆಗಮಿಸಿ, ವೀಕ್ಷಕರ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು. ಕಾರ್ಯಕ್ರಮ ಆರಂಭವಾಗಿ ಶೋಭಾ ಕರಂದ್ಲಾಜೆ ಭಾಷಣದ ನಂತರ ಕಾರ್ಯಕ್ರಮ ಉದ್ಘಾಟನೆ ಸಮಯದಲ್ಲಿ ದೇವಕಿ ಸಣ್ಣಯ್ಯ ಅವರ ವೇದಿಕೆಗೆ ಬರುವಂತೆ ಆಹ್ವಾನಿಸಲಾಯಿತು. ಆದರೆ ಕಾರ್ಯಕ್ರಮ ಆರಂಭವಾಗಿ ಅರ್ಧ ಮುಗಿದ ನಂತರ ವೇದಿಕೆಗೆ ಆಹ್ವಾನಿಸಿ ಅವಮಾನಿಸಲಾಗಿದೆ ಎಂದು ವೇದಿಕೆಯೇರದೇ ಕೂತಲ್ಲೇ ಕೂತು ಅಸಮದಾನ ಹೊರಹಾಕಿದರು.