ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹಕಾರಿ ಸಂಘಗಳ ನಿಯಮಾವಳಿಯನ್ನು ಉಲ್ಲಂಘಿಸಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಗೋದಾಮು ಹಾಗೂ ಸರ್ವ ಸರಕಿನ ಬಹುಮಹಡಿ ಕಟ್ಟಡ (ಮಳಿಗೆ) ನಿರ್ಮಿಸಲಾಗುತ್ತಿದ್ದು, ಇದಕ್ಕೆ ಆರ್‌ಸಿಎಸ್ ತಡೆಯಾಜ್ಞೆ ನೀಡಿದೆ ಎಂದು ಸಂಘದ ನಿರ್ದೇಶಕರಾದ ಬಿ. ಎಸ್. ಸುರೇಶ್ ಶೆಟ್ಟಿ ಹೇಳಿದರು.
ಉಪ್ಪುಂದದಲ್ಲಿ ಸಂಘದ ನಿರ್ದೇಶಕರಾದ ಬಿ. ಎಸ್. ಸುರೇಶ್ ಶೆಟ್ಟಿ ಹಾಗೂ ಬಿ. ರಘುರಾಮ ಶೆಟ್ಟಿ ಅವರು ಶನಿವಾರ ಸಂಜೆ ಜಂಟಿಯಾಗಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸಂಘವು ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಡಿಯಲ್ಲಿ ಗೋದಾಮು ಹಾಗೂ ಸರ್ವ ಸರಕಿನ ಬಹುಮಹಡಿ ಕಟ್ಟಡ (ಮಳಿಗೆ) ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಡಿಯಲ್ಲಿ ಸಾಲ ಮಂಜೂರಾತಿ ಪಡೆಯಲಾಗಿದೆ. ಅಲ್ಲದೇ ನಬಾರ್ಡ್ ಹಾಗೂ ಸಂಘದ ಹಣವನ್ನು ಬಳಸಿ ಸುಮಾರು 7ಕೋಟಿ 65ಲಕ್ಷದ ಮೊತ್ತದಲ್ಲಿ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ನಿಬಂಧಕರ ಕಚೇರಿಯಿಂದ ಆಡಳಿತಾತ್ಮಕ ಅನುಮತಿಯನ್ನು ಲಿಖಿತರೂಪದಲ್ಲಿ ಪಡೆದುಕೊಳ್ಳಲಾಗಿದೆ. ಈ ಅನುಮತಿ ಪತ್ರದಲ್ಲಿ ತಿಳಿಸಿರುವಂತೆ ಕಟ್ಟಡದ ನಿರ್ಮಾಣ ವೆಚ್ಚದಲ್ಲಿ ನಬಾರ್ಡ್‍ನ ಎಂ.ಎಸ್.ಸಿ. ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ 3ಕೋಟಿ 35ಲಕ್ಷ ರೂಪಾಯಿಗಳು, ಸಂಘದ ಕಟ್ಟಡ ನಿಧಿ ಬಳಕೆಯಿಂದ 4ಕೋಟಿ 28ಲಕ್ಷ ರೂಪಾಯಿಗಳು ಹಾಗೂ ನಬಾರ್ಡ್ ಸಹಾಯಧನ 2 ಲಕ್ಷ ರೂಪಾಯಿಗಳು ಸೇರಿದಂತೆ ಒಟ್ಟು 7ಕೋಟಿ 65ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ ಆದರೆ ನಿರ್ಮಾಣ ಹಂತದಲ್ಲಿ ಕಾನೂನು ಮೀರಿದೆ ಎಂದರು.
ಸಹಕಾರಿ ಸಂಘಗಳ ನಿಬಂಧಕರ ಕಚೇರಿಯಿಂದ ನೀಡಲಾದ ಅನುಮತಿ ಆದೇಶ ಪತ್ರದಲ್ಲಿ ಒಟ್ಟು 16 ಷರತ್ತುಗಳನ್ನು ವಿಧಿಸಲಾಗಿದ್ದು, ಇದರಲ್ಲಿ ಕೆಲವೊಂದು ಷರತ್ತುಗಳನ್ನು ಸಂಬಂಧಿಸಿ ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಅಲ್ಲದೇ ಕೆಟಿಪಿಪಿ ಕಾಯ್ದೆ 1999 ಹಾಗೂ ನಿಯಮ 2000 ಅಂಶಗಳನ್ನು ಉಲ್ಲಂಘಿಸಿ ಟೆಂಡರ್ ಕರೆಯದೇ ಕೊಟೇಶನ್ ಕರೆದು ಕಟ್ಟಡ ಸಾಮಾಗ್ರಿ ಖರೀದಿ ಮೊದಲಾದವುಗಳ ಬಗ್ಗೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು, ನಿಯಮಗಳನ್ನು ಗಾಳಿಗೆ ತೂರಿ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಈ ಕಾರಣಕ್ಕೆ ಸಂಘದ ಗೌರವ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ನಾವು ಸಲ್ಲಿಸಿದ್ದ ಆಕ್ಷೇಪಣೆಯನ್ನು ಪರಿಶೀಲಿಸಿದ ಮಾನ್ಯ ರಾಜ್ಯ ಸಹಕಾರ ಸಂಘಗಳ ನಿಬಂಧಕರು ಎಪ್ರಿಲ್ 25ರಂದು ಕಟ್ಟಡ ನಿರ್ಮಾಣ ಕಾಮಗಾರಿ ತಡೆಯಾಜ್ಞೆ ನೀಡಿದ್ದಾರೆ ಎಂದವರು ತಿಳಿಸಿದರು.