ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸುರಭಿ ರಿ. ಬೈಂದೂರು ಸಂಸ್ಥೆಯು 22ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಬೈಂದೂರಿನ ಶಾರದಾ ವೇದಿಕೆಯಲ್ಲಿ ಮೇ 7ರಿಂದ ಮೇ 10ರ ತನಕ ನಾಲ್ಕು ದಿನಗಳ ಕಾಲ ಸಂಜೆ 6:30ಕ್ಕೆ ಜರುಗಲಿದೆ.
ಮೇ.7ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸುರಭಿ ಅಧ್ಯಕ್ಷರಾದ ನಾಗರಾಜ ಪಿ. ಯಡ್ತರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರಲಿದ್ದಾರೆ. ಅಂದು ಚಿತ್ರಕಲಾ ಶಿಕ್ಷಕ ನರಸಿಂಹ ಪೂಜಾರಿ ಅವರನ್ನು ಸನ್ಮಾನಿಸಲಾಗುತ್ತದೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುರಭಿ ವಿದ್ಯಾರ್ಥಿಗಳಿಂದ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ನಿರ್ದೇಶನದಲ್ಲಿ ಗಾನ ಲಹರಿ, ಸುರಭಿ ವಿದ್ಯಾರ್ಥಿಗಳಿಂದ ವಿದೂಷಿ ಮಾನಸ ರಾಘವೇಂದ್ರ ಅವರ ನಿರ್ದೇಶನದಲ್ಲಿ ‘ನೃತ್ಯ ವೈವಿಧ್ಯ’ ಸುರಭಿ ವಿದ್ಯಾರ್ಥಿಗಳಿಂದ ಚಿತ್ರಕಲಾ ಶಿಕ್ಷಕ ಗಿರೀಶ್ ಗಾಣಿಗ ನಿರ್ದೇಶನದಲ್ಲಿ ’ನಾದ ಕುಂಚ ಸಂಭ್ರಮ’ ಜರುಗಲಿದೆ.
ಮೇ.8ರಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಪ್ರತಿಭಾನ್ವಿತ ಕಲಾವಿದ ಕಿಶನ್ ಕೆ. ಪ್ರಭು ಅವರನ್ನು ಸನ್ಮಾನಿಸಲಾಗುತ್ತದೆ.
ಬಳಿಕ ಯಕ್ಷ ಸುರಭಿ ಕಲಾವಿದರಿಂದ, ಪ್ರಶಾಂತ ಮಯ್ಯ ದಾರಿಮಕ್ಕಿ ನಿರ್ದೇಶನದಲ್ಲಿ ಅರ್ಜುನ – ಅರ್ಜುನ – ಕಾರ್ತವೀರ್ಯಾರ್ಜುನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ: ಸುರಭಿ ಜೈಸಿರಿ 2022 ಆಮಂತ್ರಣ ಪತ್ರಿಕೆ ಬಿಡುಗಡೆ – https://kundapraa.com/?p=59083
ಮೇ.9ರ ಸೋಮವಾರ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಈ ಭಾರಿ ಸಾಂಸ್ಕೃತಿಕ ಚಿಂತಕ, ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ಎಂ. ಮೋಹನ ಆಳ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಂದು ಸಂಜೆ ನಡೆಯುವ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ವಹಿಸಲಿದ್ದು, ವಿವಿಧ ಅತಿಥಿ ಗಣ್ಯರು ಉಪಸ್ಥಿತರಿರುವರು.
ಬಳಿಕ ಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ನಿರ್ದೇಶನದಲ್ಲಿ ’ನೃತ್ಯ ದರ್ಪಣ’ ಹಾಗೂ ರೂಪಕ ’ಜಟಾಯ ಮೋಕ್ಷ’ ನೃತ್ಯ ಪ್ರದರ್ಶನ ಮತ್ತು ಸುರಭಿ ಮಹಿಳಾ ಸದಸ್ಯರಿಂದ ’ಚಂಡೆ ವಾದನ’ ಜರುಗಲಿದೆ.
ಮೇ.10ರಂದು ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ವಹಿಸಲಿದ್ದು, ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಗುರುದತ್ತ ಗಾಣಿಗ ಅವರನ್ನು ಸನ್ಮಾನಿಸಲಾಗುತ್ತದೆ.
ಅಂದು ಸುರಭಿ ಕಲಾವಿದ ರಾಜೇಂದ್ರ ಕಾರಂತ್ ರಚಿಸಿ, ಯೋಗೀಶ್ ಬಂಕೇಶ್ವರ್ ನಿರ್ದೇಶಿಸಿದ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿಯೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
















