ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಊರು ಅಭಿವೃದ್ಧಿ ಹೊಂದಿದಂತೆ ಸೌಂದರ್ಯಪ್ರಜ್ಞೆಯುಳ್ಳ ವ್ಯಕ್ತಿಗಳು ನಮ್ಮ ನಡುವೆ ಇರುವಂತೆ ಮಾಡುವುದು ಬಹುಮುಖ್ಯ. ಸೌಂದರ್ಯಪ್ರಜ್ಞೆ ಇದ್ದವರಿಗೆ ದೇಶ, ಭಾಷೆ, ಕಲೆ, ಬದುಕು, ಸಾಮರಸ್ಯದ ಬದುಕು ಸೇರಿದಂತೆ ಎಲ್ಲವನ್ನೂ ಪ್ರೀತಿಸುವ ಗುಣವಿರುತ್ತದೆ. ಅಂತವರೇ ದೇಶದ ಬಹುದೊಡ್ಡ ಸಂಪತ್ತು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಸೋಮವಾರ ಜರುಗಿದ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಾಮಾಜಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರದಲ್ಲಿ ಕಂದಕಗಳನ್ನು ಗಮನಿಸುತ್ತಿದ್ದೇವೆ. ಇಂತಹ ಅಂತರ ತಗ್ಗಿಸಲು ಶೈಕ್ಷಣಿಕವಾಗಿ ಹಾಗೂ ಭೌದ್ಧಿಕವಾಗಿ ಮಾತ್ರ ಬಲಾಢ್ಯರಾದರೆ ಸಾಲದು, ಜೊತೆಗೆ ಸುಂದರ ಮನಸ್ಸುಗಳನ್ನು ಕಟ್ಟುವ ಮೂಲಕ ಮಾಡಬೇಕಿದೆ. ಮಾಡಬೇಕಿದೆ ಎಂದರು.
ಮಕ್ಕಳನ್ನು ದೇಶದ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಶೈಕ್ಷಣಿಕ ಕಲಿಕೆಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳುವಂತೆ ಮಾಡಿ ಆ ಮೂಲಕ ತಮ್ಮ ಇರುವಿಕೆಯನ್ನು ತೋರಿಸಿ ಜಗತ್ತಿಗೆ ತೋರುವಂತೆ ಮಾಡುವುದು ಮುಖ್ಯ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಬ್ಯಾಂಕ್ ಅಧಿಕಾರಿ ವಸಂತ ಹೆಗ್ಡೆ ಶುಭಶಂಸನೆಗೈದರು. ನಿವೃತ್ತ ಉಪನ್ಯಾಸಕ ಜನಾರ್ದನ ಮರವಂತೆ ಅಭಿನಂದನಾ ನುಡಿಗಳನ್ನಾಡಿದರು. ಬೈಂದೂರು ಜಾತ್ರೆ ಉತ್ಸವ ಸಮಿತಿ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಜಿ.ಪಂ ಮಾಜಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಬಿ. ಶ್ರೀಧರ ಬೇಲೆಮನೆ ಉಪಸ್ಥಿತರಿದ್ದರು.
ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಸುರಭಿಯ ಆನಂದ ಮದ್ದೋಡಿ ಪ್ರಸ್ತಾವನೆಗೈದರು. ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿದರು. ಕಾರ್ಯದರ್ಶಿ ಭಾಸ್ಕರ ಬಾಡ ವಂದಿಸಿದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು. ಪೂರ್ಣಿಮಾ ಹಾಗೂ ಪೂರ್ಣಿಮಾ ಪ್ರಾರ್ಥಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಬೈಂದೂರು ರಥಬೀದಿಯಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಸಭಾ ಕಾರ್ಯಕ್ರಮದ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅವರ ನಿರ್ದೇಶನದಲ್ಲಿ ಸುರಭಿ ಭರತನಾಟ್ಯ ವಿದಾರ್ಥಿಗಳಿಂದ ನೃತ್ಯ ದರ್ಪಣ ಹಾಗೂ ಜಟಾಯು ಮೋಕ್ಷ ರೂಪಕ ಪ್ರದರ್ಶನಗೊಂಡಿತು.