ಗಂಗೊಳ್ಳಿ: ಕ್ರೀಡಾಳುಗಳಿಗೆ ಕ್ರೀಡಾ ಮನೋಭಾವ ಅತ್ಯಂತ ಮುಖ್ಯವಾದದ್ದು. ಸೋಲು ಗೆಲುವು ಸಹಜ. ಆದರೆ ನಮ್ಮ ಗುರಿ ಮತ್ತು ಪ್ರಯತ್ನ ಗೆಲುವಿನ ಕಡೆಗಿರಬೇಕು ಎಂದು ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಶಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ ಕಾಮತ್ ಅಭಿಪ್ರಾಯಪಟ್ಟರು.ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸ೦ಘದ ಅಧ್ಯಕ್ಷ ವಸಂತ ಶೆಟ್ಟಿ . ಸರಸ್ವತಿ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ,ವಿದ್ಯಾರ್ಥಿ ಪ್ರತಿನಿಧಿಗಳಾದ ಅನುಷಾ ಶೆಣೈ ಮತ್ತು ಸಚಿನ್ ಪೂಜಾರಿ ಉಪಸ್ಥಿತರಿದ್ದರು.ಉಪನ್ಯಾಸಕಿ ಕವಿತಾ ಎಮ್ ಸಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರೂಪಿಸಿದರು.