ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪದ್ಮಾವತಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಕನ್ನಡ ಸಿನೆಮಾ ಮೇ.20ರ ಶುಕ್ರವಾರ ಭಾರತ್ ಸಿನಿಮಾಸ್ ಚಿತ್ರಮಂದಿರಗಳಲ್ಲಿ ಸಂಜೆ 4ಗಂಟೆಯ ಶೋ ಮೂಲಕ ತೆರೆಕಾಣಲಿದೆ.
ಈ ಬಗ್ಗೆ ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ತೇಜಸ್ವಿ ವಿಘ್ನೇಶ್ ಮಾಹಿತಿ ನೀಡಿ ಭಾರತ್ ಸಿನಿಮಾಸ್ ಕುಂದಾಪುರ, ಮಣಿಪಾಲ್, ಮಂಗಳೂರು, ಶಿವಮೊಗ್ಗದಲ್ಲಿ ಪ್ರತಿನಿತ್ಯ ಸಂಜೆ 4ಗಂಟೆಗೆ ಒಂದು ಶೋ ಪ್ರದರ್ಶನ ಕಾಣಲಿದೆ ಎಂದರು.
ಚಿತ್ರವು ಮೂರು ವಿಭಾಗವನ್ನು ಹೊಂದಿದ್ದು ಪ್ರಮುಖ ಭಾಗವನ್ನು ತೇಜಸ್ವಿ ವಿಘ್ನೇಶ ನಿರ್ದೇಶನ ಮಾಡಿದ್ದು, ಉಪ ಕಥೆಯನ್ನು ಬಾಸುಮಾ ಕೊಡಗು ಹಾಗೂ ತಮಿಳು ವಿಭಾಗದ ಉಪಕಥೆಯ ನಿರ್ದೇಶನವನ್ನು ಶಿವ.ಕೆ ಅವರಿಗೆ ವಹಿಸಲಾಗಿತ್ತು.
ಚಿತ್ರದ ನಿರ್ದೇಶನ ಹಾಗೂ ನಿರ್ಮಣ ಜವಾಬ್ದಾರಿ ಹೊತ್ತಿರುವುದು ಕುಂದಾಪುರ ಯುವಕ. ಕುಂದಾಪುರದ ದಿನೇಶ್ ಶೇರುಗಾರ್ ಹಾಗೂ ಪದ್ಮಾವತಿ ದಂಪತಿಗಳ ಪುತ್ರರಾದ ತೇಜಸ್ವಿ ವಿಘ್ನೇಶ್ ಅವರ ಚೊಚ್ಚಲ ನಿರ್ದೇಶನದ ಸಿನೆಮಾ ‘ಶಾಂತಿಯನ್ನು ಕಾಪಾಡಿಕೊಳ್ಳಿ’.
ವಿಘ್ನೇಶ್ ಕಳೆದ 15 ವರ್ಷಗಳಿಂದ ಸಿನೆಮಾ ಇಂಡಸ್ಟ್ರೀಯಲ್ಲಿ ತೊಡಗಿಕೊಂಡಿದ್ದು, ಚುಕ್ಕಿ, ಮೀರ ಮಾಧವ, ಅಂಬಾರಿ ಮೊದಲಾದ ಸಿನೆಮಾಗಳಲ್ಲಿ ಸಹನಿರ್ದೇಶಕರಾಗಿ ದುಡಿದಿದ್ದಾರೆ. ಇದೀಗ ಸ್ವಂತ ಬ್ಯಾನರ್ ಅಡಿಯಲ್ಲಿ ಸಿನೆಮಾ ನಿರ್ದೇಶನ ಮಾಡುವ ಮೂಲಕ ತಮ್ಮ ನಿರ್ದೇಶಕನಾಗುವ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಬಹುತೇಕ ಎಲ್ಲಾ ಕಲಾವಿದರು ಅವಿಭಜಿತ ದಕ್ಷಿಣ ಕನ್ನಡದವರೇ ಆಗಿದ್ದು, ರಂಗಭೂಮಿ ಹಾಗೂ ಸಿನೆಮಾದಲ್ಲಿ ತೊಡಗಿಸಿಕೊಂಡಿರುವ ನಟ ನಟಿಯರು ಅಭಿನಯಿಸಿದ್ದಾರೆ. ಬಹುತೇಕ ಎಲ್ಲಾ ಚಿತ್ರೀಕರಣ ಕುಂದಾಪುರ, ಉಡುಪಿ ಪರಿಸರದಲ್ಲಿ ಮಾಡಲಾಗಿದ್ದು, ಒಂದು ಭಾಗದ ಕಥೆಯನ್ನು ಚೆನೈನ ಹಳ್ಳಿಯೊಂದರಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ನಿರ್ಮಾಣ, ವಿತರಣೆ ಜವಾಬ್ದಾರಿಯನ್ನು ಪದ್ಮಾವತಿ ಸ್ಟುಡಿಯೋಸ್ ಹೊತ್ತುಕೊಂಡಿದೆ.
ಕತೆಗೆ ಪೂರಕವಾಗಿ ಚಿತ್ರಿಕರಣವನ್ನು ನೈಜ ರೀತಿಯಲ್ಲಿ ಕಾಣುವಂತೆಯೇ ಚಿತ್ರಿಸಲಾಗಿದೆ. ಚಿತ್ರವು ಮಾನವೀಯ ಮೌಲ್ಯಗಳನ್ನು ಹೊಂದಿದ್ದು ನಿಜವಾದ ಅರ್ಥದಲ್ಲಿ ಸಾರ್ಥಕ ಜೀವನದ ಸಂದೇಶಗಳನ್ನು ಒಳಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕನಟ ಕಾರ್ತಿಕ್, ಚಿತ್ರತಂಡದ ಎಸ್.ಎನ್. ಭಟ್, ಚಂದ್ರಕಲಾ ಭಟ್, ಪ್ರಥ್ವಿನಂದನ್ ಮೊದಲಾದವರು ಉಪಸ್ಥಿತರಿದ್ದರು.