ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಮೇ.22: ಹಣ್ಣುಗಳ ರಾಜನೆಂದೇ ಪ್ರಖ್ಯಾತವಾದ, ಹಿರಿಯರಿಂದ ಕಿರಿಯರಿಂದ ಹಿಡಿದು ಹಿರಿಯರವರೆಗೂ ಬಾಯಯಲ್ಲಿ ನಿರೂರಿಸುವ ವಿವಿಧ ಬಗೆಯ ಮಾವಿನ ಹಣ್ಣಿನ ಮೇಳವನ್ನು ಉಡುಪಿ ದೊಡ್ಡಣಗುಡ್ಡೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಗ್ರಾಹಕರಿಗೆ ನೇರವಾಗಿ ರೈತರಿಂದಲೇ ನೈಸರ್ಗಿಕ ತಾಜಾ ಹಾಗೂ ಸ್ವಾದಿಷ್ಟ ಮಾವಿನ ಹಣ್ಣು ಒದಗಿಸುವುದು, ಸಾರ್ವಜನಿಕರಿಗೆ ವಿವಿಧ ಮಾವಿನ ತಳಿಗಳನ್ನು ಪರಿಚಯಿಸುವುದು, ಹವಾಮಾನ ವೈಪರೀತ್ಯದಿಂದಾಗಿ ಮಾವು ಇಳುವರಿ ನಷ್ಟದಲ್ಲಿರುವ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿ. ಪಂ ಹಾಗೂ ತೋಟಗಾರಿಕೆ ಇಲಾಖೆಯಿಂದ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಆಶ್ರಯದಲ್ಲಿ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 21ರಿಂದ 23ರವರೆಗೆ ಆಯೋಜಿಸಿದೆ.
ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಯನ್ನು ತೆರೆಯಲಾಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್ಸ್ ಸಹಿತ ನಾನ ತಳಿಯ ಒಟ್ಟು 30 ಟನ್ ಮಾವು ಮೇಳದಲ್ಲಿ ಲಭ್ಯವಿದೆ.
ಮಾವು ಮೇಳದಲ್ಲಿ ಸಕ್ಕರೆಗುತ್ತಿ ಮಾವು ವಿಶೇಷ ಆಕರ್ಷಣೆಯಾಗಿದ್ದು, ಕೆಜಿಗೆ 200 ದರವಿದೆ., ತಿನ್ನಲು ರುಚಿಕರವಾಗಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ.
ಮೊದಲ ಭಾರಿಗೆ ನಡೆದ ಮಾವು ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮಾವು ಬೆಳೆ ಪ್ರಮಾಣ ತೀರ ಕಡಿಮೆ ಇದ್ದರೂ, ಮೇಳದ ಮೊದಲ ದಿನವೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಮೇಳದಲ್ಲಿ ಭಾಗವಹಿಸಿ ವಿವಿಧ ಹಣ್ಣುಗಳ ರುಚಿ ಸವಿದು, ಖರೀದಿ ಮಾಡಿದರು.
ಮಾವು ಮೇಳ ಉದ್ಘಾಟಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮಾವು ಮೇಳ ಉತ್ತಮ ಕಾರ್ಯಕ್ರಮವಾಗಿದ್ದು , ರೈತರು ತಮ್ಮ ಉತ್ಪನ್ನಗಳನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡುವುದರಿಂದ ಇದರ ಸಂಪೂರ್ಣ ಲಾಭವನ್ನು ದಲ್ಲಾಳಿಗಳೇ ಪಡೆದುಕೊಳ್ಳುತ್ತಾರೆ ಇದು ರೈತರಲ್ಲಿ ನಿರಾಸೆಯ ಜೊತೆಗೆ ನಷ್ಟವನ್ನು ಅನುಭವಿಸುವಂತಾಗುತ್ತದೆ ಇದರಿಂದಾಗಿ ರೈತರು ಆರ್ಥಿಕವಾಗಿ ಸಂಕಷ್ಟ ಅನುಭವಿಸ ಬೇಕಾಗುತ್ತದೆ.
ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಫಾರ್ಮೆರ್ ಫ್ರೋಡ್ಯೂಸರ್ ಒರ್ಗನೈಸೆಷನ್ ಅಕ್ಟ್ ಮೂಲಕ , ರೈತರಿಗೆ ಆಗುವಂತಹ ನಷ್ಟವನ್ನು ತಪ್ಪಿಸಿ ಸ್ವತಹ ಅವರೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸುವ ಉದ್ದೇಶ ಇದೆ ಎಂದರು
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ ನಾಯಕ್. ಕುಂದಾಪುರ ಸಹಾಯಕ ಕಮಿಷನರ್ ರಾಜು. ಕೆ , ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ಮತ್ತಿತರರು ಹಾಜರಿದ್ದರು