ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ನಾಡ್ ಸದಾಶಿವರಾಯರು ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನೆಲ್ಲಾ ಶ್ರೀಮಂತಿಕೆ ಧಾರೆಯೆರೆದರೆ, ಅವರ ಪತ್ನಿ ಸ್ವಾತಂತ್ರ್ಯ ಹೋರಾಟಗಾರರ ಹಸಿವು ನೀಗಿಸಲು ಧಾರೆ ಸೀರೆ ತ್ಯಾಗ ಮಾಡಿದರು. ಮಹಿಳೆಯರು ಮಾಂಗಲ್ಯವನ್ನೇ ತ್ಯಾಗ ಮಾಡಿದರು. ಇದು ಕರಾವಳಿಗರ ಕೊಡುಗೆಯಾಗಿದೆ. ಸ್ವಾಂತ್ರ್ಯಕ್ಕಾಗಿ ತ್ಯಾಗ, ಹೋರಾಟ ಮಾಡಿದ ಎಲ್ಲರ ನೆನಪಿಸಿಕೊಳ್ಳುವುದೇ ಅಮೃತ ಭಾರತಿಗೆ ಕನ್ನಡದ ಆರತಿ ಉದ್ದೇಶ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಬಸ್ರೂರು ಶ್ರೀ ಶಾರದಾ ಕಾಲೇಜ್ ಆವರಣದಲ್ಲಿ ಶನಿವಾರ ನಡೆದ ಅಮೃತ ಭಾರತಿಗೆ ಕನ್ನಡ ಆರತಿ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟವರ, ದುಡಿದವರ, ಮಡಿದವರ ಹೋರಾಟ ನೆನಪಿಸಿಕೊಂಡು ನಾವು ಸ್ವಾತಂತ್ರ್ಯದ ನಂತರ ಎಷ್ಟು ಹೆಜ್ಜೆ ಮುಂದಿಟ್ಟಿದ್ದೇವೆ ಎನ್ನುವುದ ಯೋಚಿಸಿದರೆ ನಮ್ಮ ದೂರಗಾಮಿತ್ವ, ಕ್ರಮಿಸುವ ದೂರ ಬಹಳಷ್ಟಿದೆ ಎಂದು ಅನ್ನಿಸುತ್ತಿದೆ. ಸ್ವಾತಂತ್ರ್ಯ ನಂತರ ಅನೇಕ ಸರ್ಕಾರ ಬಂದಿದೆ, ಪ್ರಧಾನಮಂತ್ರಿ, ಜನಪ್ರತಿನಿಧಿಗಳು ಶ್ರಮ ಮರೆಯುವಂತಿಲ್ಲ. ಆದರೆ ಸ್ವತಂತ್ರಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದವರು ಹೆಚ್ಚು ತ್ಯಾಗಿಗಳು ಎಂದು ಬಣ್ಣಿಸಿದರು.
ನಮ್ಮನ್ನು ನೋಡಿ ವ್ಯಂಗ್ಯ ಮಾಡುತ್ತಿದ್ದ, ದ್ವೇಷಿಸುತ್ತಿದ್ದ, ಟೀಕೆ ಮಾಡುತ್ತಿದ್ದ ದೇಶಗಳು ಕೂಡಾ ಭಾರತದತ್ತ ನೋಡುವಂತಾಗಿದೆ. ಜಾತಿ, ಕುಟುಂಬ, ಭಾಷೆ, ಬದುಕು, ಧರ್ಮಕ್ಕಿಂತ ದೇಶ ದೊಡ್ಡದು ಎನ್ನುವ ಭಾವನೆಯಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸೃಷ್ಟಿಯಾಗುವ ಅವಶ್ಯವಿದೆ. ಇತಿಹಾಸದ ಕುರಿತು ಟೀಕೆ ಟಿಪ್ಪಣಿ ಮಾಡುವುದಕ್ಕಿಂತ ಇತಿಹಾಸ ಮರು ಚಿಂತೆನೆಯ ಅವಶ್ಯಕತೆಯಿದೆ ಎಂದು ಶಾಲಾ ಪುಸ್ತಕ ವಿವಾದದ ಕುರಿತು ವಿರೋದಿಸುವವರಿಗೆ ಪರೋಕ್ಷ ಚಾಟಿ ಬೀಸಿದರು.
ಬಸ್ರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಕೆಂಪೇಗೌಡ ಮೆಡಿಕಲ್ ಕಾಲೇಜ್ ಸೂಕ್ಷ್ಮಜೀವ ವಿಜ್ಞಾನ ವಿಭಾಗ ಪ್ರಾಧ್ಯಾಪಕ ಗಿರಿಧರ ಉಪಾಧ್ಯಾಯ ಉಪನ್ಯಾಸ ಮಾಡಿದರು.
ಬೈಂದೂರು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀ ಹೆಚ್.ಎಸ್, ಬ್ರಹ್ಮಾವರ ತಹಸೀಲ್ದಾರ್ ರಾಜಶೇಖರಮೂರ್ತಿ, ಬ್ರಹ್ಮಾವರ ಇಒ ಇಬ್ರಾಹಿಂ ಪೂರ್, ಕುಂದಾಪುರ ಇಒ ಶ್ವೇತಾ ಎನ್. ಬೈಂದೂರು ಇಒ ಭಾರತಿ, ರಾಜ್ಯ ಆಹಾರ ನಿಗಮ ಉಪಾಧ್ಯಕ್ಷೆ ಕಿರಣ್ ಕೊಡ್ಗಿ, ಕಲಾಕ್ಷೇತ್ರ ಅಧ್ಯಕ್ಷ ಕಿಶೋರ್ ಕುಮಾರ್ ಬಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಇದ್ದರು.
ಸ್ವಾತಂತ್ರ್ಯ ಹೋರಾಟಗಾರರಾದ ಬಸ್ರೂರು ಗೋಪಾಲಕೃಷ್ಣ ಶೆಣೈ ಪುತ್ರಿ ಮಹಾಲಕ್ಮೀ ಕಾಮತ್, ಬಳ್ಕೂರು ಗಾಂಧಿ ರಾಮಣ್ಣ ಶೆಟ್ಟಿ ಅಳಿಯ ನಿವೃತ್ತ ಪ್ರಾಂಶುಪಾಲ ಪ್ರೊ. ಗಣಪಯ್ಯ ಶೆಟ್ಟಿ, ಕೊಳ್ಕೆಬೈಲು ಮಹಾಬಲ ಶೆಟ್ಟಿ ಪುತ್ರ ಪ್ರಕಾಶ್ಚಂದ್ರ ಶೆಟ್ಟಿ, ಕಳಂಜೆ ಕೃಷ್ಣ ಭಟ್ ಪುತ್ರ ಶ್ರೀಧರ ಭಟ್ ಅವರ ಸನ್ಮಾನಿಸಲಾಯಿತು.
ಬಸ್ರೂರು ಶ್ರೀ ಶಾರದಾ ಕಾಲೇಜ್, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಮತ್ತು ಡಾ.ಬಿ.ಬಿ.ಹೆಗ್ಡೆ ಕಾಲೇಜ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಗುಜ್ಜಾಡಿ ಶ್ರೀ ಚೆನ್ನಬಸವೇಶ್ವರ ಕಲಾ ಸಂಘದಿಂದ ವೀರಗಾಸೆ; ಧಾರಿಣಿ, ಅಶೋಕ್ ಸಾರಂಗ, ಪ್ರಾಪ್ತಿ ಹೆಗ್ಡೆ, ಕಮಲ್ ಕೆ. ಕುಂದಾಪುರ ಗಾಯನ; ಪ್ರವಿತ ಅಶೋಕ್ ನಿರ್ದೇಶನದಲ್ಲಿ ಕುಂದಾಪುರ ವಸಂತ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಮಹಿಳಾ ಚಂಡೆ ಬಳಗದಿಂದ ಚಂಡೆ ವಾದನ ನಡೆಯಿತು.
ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಸ್ವಾಗತಿಸಿದರು. ಕುಂದಾಪುರ ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಪ್ರಮಾಣ ವಚನ ಭೋದಿಸಿದರ. ಶ್ರೀ ಶಾರದಾ ಕಾಲೇಜ್ ಉಪನ್ಯಾಸಕರಾದ ಡ್ರೀಮಾ ಡಿಸೋಜಾ, ಅನಿತಾ ವಿ.ಎಂ., ನಿವೃತ್ತ ಶಿಕ್ಷಕ ದಿನಕರ ಆರ್. ಶೆಟ್ಟಿ ನಿರೂಪಿಸಿದರು. ಶ್ರೀ ಶಾರದಾ ಕಾಲೇಜ್ ಪ್ರಾಂಶುಪಾಲೆ ಡಾ.ಚಂದ್ರಾವತಿ ಶೆಟ್ಟಿ ಸನ್ಮಾನಿತರ ಪರಿಚಯಿಸಿದರು. ಕುಂದಾಪುರ ವಲಯ ಶಿಕ್ಷಣಾಧಿಕಾರಿ ಅರುಣ ಕುಮಾರ ಶೆಟ್ಟಿ ವಂದಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೊದಲ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದು, ಅಮೃತಮಹೋತ್ಸವದ ಸಂದರ್ಭದಲ್ಲಿಯೂ ನಾನು ಭಾಗಿಯಾಗುತ್ತಿರುವುದು ಅತ್ಯಂತ ಖುಷಿಯ ವಿಷಯ. ಇಂತಾ ಕಾರ್ಯಕ್ರಮಗಳ ಮೂಲಕ ಹೆಚ್ಚು ಹೆಚ್ಚು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಾಹನ್ ಜನರ ಮಹತ್ವ ತಿಳುಸುವಂತಾ ಸ್ತುತ್ಯಾರ್ಹವಾಗಿದ್ದು, ಸ್ವತಂತ್ರದ ಹಿಂದಿರುವ ಶ್ರಮ, ಬಲಿದಾನ, ತ್ಯಾಗದ ಮಹತ್ವ ಯುವಕರು ತಿಳಿಯುತ್ತಿಲ್ಲ. ತಾಯಿಯಷ್ಟೇ ಗೌರವಿಸುವ ನಮ್ಮ ದೇಶ ದೊಡ್ಡದೆಂದು ಪ್ರೀತಿಸುವ ಯುವ ಮನಸ್ಸುಗಳ ಅವಶ್ಯಕತೆ ಇದೆ. ದೇವರ ಕಾರ್ಯದಂತೆ ದೇಶದ ಕೆಲಸ ಕೂಡಾ ಅಷ್ಟೇ ಪುಣ್ಯದ ಕೆಲಸ. – ಬಿ. ಅಪ್ಪಣ್ಣ ಹೆಗ್ಡೆ, ಆಡಳಿತ ಮೊಕೇಸರ, ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು.
ಅಮೃತಭಾರತಿಗೆ ಕನ್ನಡ ಆರತಿ ಹಿನ್ನೆಲೆಯಲ್ಲಿ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೀಲು ಕುದುರೆ, ಚಂಡೆ, ವೀರಗಾಸೆ, ಸಹಿತಿ ನಡೆದ ಮೆರವಣಿಗೆಗೆ ಮಾಜಿ ಸಚಿವ ಕೆ.ಜಯಪರಕಾಶ್ ಹೆಗ್ಡೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳು, ಸ್ವಯಂಸೇವಕರು, ನೆವಿ, ಕುಂದಾಪುರ ಕಲಾರಂಗ, ಸ್ಕೌಟ್‌ಮತ್ತು ಗೈಡ್ಸ್ ಪಾಲ್ಗೊಂಡಿದ್ದು, ಪ್ರಮುಖ ರಸ್ತೆಯಲ್ಲಿ ಸಾಗಿ ಮೆರವಣಿಗೆ ಕಾರ್ಯಕ್ರಮ ಸಾಭಾಂಗಣಕ್ಕೆ ಆಗಮಿಸಿತು.