ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ‘ಬಾಲವನದ ಜಾದೂಗಾರ’ ಎಂಬ ಕಿರುಚಿತ್ರದ ಚಿತ್ರೀಕರಣಕ್ಕೆ ಕರ್ನಾಟಕದ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚಾಲನೆ ನೀಡಿದರು.
ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು “ಕಾರಂತರು ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಸಾಧನೆ ಮಾಡಿದವರು. ಮಕ್ಕಳಿಗಾಗಿಯೂ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಚಿಂತನೆಯ ಮೂಲಕ ಮಕ್ಕಳಲ್ಲಿ ಉತ್ತಮ ಪ್ರಭಾವ ಉಂಟಾಗುವುದಾದರೆ ಅದು ಹೆಮ್ಮೆಯ ವಿಷಯ. “ಬಾಲವನದ ಜಾದೂಗಾರ” ಚಿತ್ರದಲ್ಲಿ ತುಂಟ ವಿದ್ಯಾರ್ಥಿಯೊಬ್ಬ ಕಾರಂತರ ಪ್ರಭಾವದಿಂದಲೇ ಉತ್ತಮ ವಿದ್ಯಾರ್ಥಿಯಾಗಿ ಪರಿವರ್ತನೆ ಹೊಂದುವ ಕತೆ ಇದೆ. ಈ ಚಿತ್ರ ಕನ್ನಡದಲ್ಲಿ ನಿರ್ಮಾಣಗೊಂಡು ಬೇರೆ ಭಾಷೆಗಳಿಗೂ ಭಾಷಾಂತರಗೊಂಡು ಯಶಸ್ಸು ಗಳಿಸುವಷ್ಟು ಚೆನ್ನಾಗಿ ಬರಲಿ ಎಂದು ಆಶಿಸುತ್ತೇವೆ. ಸರಕಾರದಿಂದ ಸಿಗಬಹುದಾದ ನೆರವಿನ ಬಗ್ಗೆ ನಾನು ಪ್ರಯತ್ನಿಸುತ್ತೇನೆ” ಎಂದು ಶುಭ ಹಾರೈಸಿದರು.
ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಕೆ. ರಾಧಾಕೃಷ್ಣ ಶೆಣೈ, ಖ್ಯಾತ ಮನೋವೈದ್ಯ ಡಾ| ಕೆ. ಎಸ್. ಕಾರಂತ್, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಚಿತ್ರಕತೆ ಬರೆದ ಪಾರ್ವತಿ ಜಿ. ಐತಾಳ್, ಕೇರಳ ಸಮಾಜ ಮಂಗಳೂರು ಇದರ ಅಧ್ಯಕ್ಷ ಟಿ. ಕೆ. ರಾಜನ್, ಕೇರಳ ಸಮಾಜ ಉಡುಪಿ ಅಧ್ಯಕ್ಷ ಸುಗುಣ, ಕಾರ್ಯದರ್ಶಿಗಳಾದ ವಿ. ಜೆ. ಥೋಮಸ್, ಬಿನೇಶ್ ಉಡುಪಿ, ನಮ್ಮ ಭೂಮಿಯ ಶಿವಾನಂದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ ಹಿರಿಯ ವಕೀಲ ಎ. ಎಸ್. ಎನ್. ಹೆಬ್ಬಾರ್ “ಕಾರಂತರು ವಿಶ್ವ ಮಾನವರಾಗಿದ್ದು ಅವರ ಸಾಧನೆ ಅಪೂರ್ವ ಅವರು ನಮ್ಮೂರಿನವರು ಎನ್ನುವುದೇ ನಮಗೆ ಹೆಮ್ಮೆ, ಅವರನ್ನು ಮಾರ್ಗದರ್ಶಕರಾಗಿ ಇಟ್ಟುಕೊಂಡು “ಬಾಲವನದ ಜಾದೂಗಾರ” ಚಲನಚಿತ್ರ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಈ ಚಿತ್ರ ತಂಡಕ್ಕೆ ಹಾಗೂ ಚಲನಚಿತ್ರಕ್ಕೆ ಎಲ್ಲರ ಪ್ರೋತ್ಸಾಹ ಇರಲಿ ಎಂದರು.”
ಚಿತ್ರ ನಿರ್ದೇಶಕ ಇ. ಎಮ್. ಅಶ್ರಫ್ ಚಿತ್ರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಪ್ರಭ ಸಂಪಾದಕ ಯು. ಎಸ್. ಶೆಣೈ ಸ್ವಾಗತಿಸಿ ನಿರೂಪಿಸಿದರು. ನಿರ್ಮಾಪಕ ಕುಂದಾಪುರದ ವಸಂತ ಬೇಕರಿಯ ಮಾಲಕ ಕೆ. ಪಿ. ಶ್ರೀಶನ್ ವಂದಿಸಿದರು.