ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜೂ.23: ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ದರೋಡೆಕೋರರನ್ನು ಬೆನ್ನಟ್ಟಿದ ಬೈಂದೂರು ಪೊಲೀಸರು ಕೆಲವೇ ದಿನಗಳಲ್ಲಿ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಹಿತ ಆರೋಪಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಂದೂರಿನಿಂದ ದೂರದ ಮಧ್ಯಪ್ರದೇಶದ ತನಕ ಆರೋಪಿಗಳನ್ನು ಬೆನ್ನಟ್ಟಿ ಒಟ್ಟು 466.90 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡ ಬೈಂದೂರು ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆರೋಪಿಗಳಾದ ಆಲಿಬಾನ್ (31), ಆಮ್ಜಲ್ಖಾನ್ (35) ಇಕ್ರಾರ್ (30) ಹಾಗೂ ಗೋಪಾಲ್ ಆಮ್ಲವರ್ (35) ಎಂಬ ನಾಲ್ವರನ್ನು ಬಂಧಿಸಿ ನ್ಯಾಯಾಲಯ ಹಾಜರುಪಡಿಸಿದ್ದು, ನ್ಯಾಯಾಲಯವು ಐದು ದಿನದ ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರಕರಣದ ಹಿನ್ನೆಲೆ:
ಮಹಾರಾಷ್ಟ್ರದ ಥಾಣೆ ನಿವಾಸಿ ಈಶ್ವರ್ ದಲಿಚಂದ್ ಮುಂಬೈನಲ್ಲಿ ಚಿನ್ನ ಖರೀದಿಸಿ ಉಡುಪಿ, ಮಂಗಳೂರು ಮೊದಲಾದೆಡೆ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು. ಮುಂಬೈನಿಂದ ಬಸ್ಸಿನಲ್ಲಿ ಹೊರಟು ಜೂನ್ 16 ರಂದು ಶಿರೂರು ನೀರ್ಗದ್ದೆಯ ಹೋಟೆಲಿನಲ್ಲಿ ಉಪಹಾರಕ್ಕೆಂದು ನಿಲ್ಲಿಸಿದಾಗ ಅಪರಿಚಿತ ತಂಡವೊಂದು 466.90 ಗ್ರಾಂ ಒಟ್ಟು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆ ಡಿವೈಎಸ್ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿತ್ತು. ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಮತ್ತು ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಮುಂದಾಳತ್ವದ ಪ್ರತ್ಯೇಕ ತಂಡಗಳು ರಚಿಸಿ ಒಂದು ತಂಡ ಬೆಂಗಳೂರಿಗೆ ಹಾಗೂ ಇನ್ನೊಂದು ತಂಡ ಮುಂಬೈ ಕಡೆಗೆ ಕಳುಹಿಸಲಾಗಿತ್ತು.
ಚಿನ್ನಾಭರಣ ದರೋಡೆಗೈದ ತಂಡ ಮಾರುತಿ ಬ್ರಿಝಾ ಕಾರಿನ ನಂಬರ್ ಬದಲಿಸಿ ಶಿವಮೊಗ್ಗ ಕಡೆಗೆ ಪರಾರಿಯಾಗಿದ್ದರು. ಸಾಗರದಲ್ಲಿ ತೆಲಂಗಾಣ, ಬೆಂಗಳೂರು ನಂಬರ್ ಪ್ಲೇಟ್ ಬಳಸಿದರೆ ಶಿವಮೊಗ್ಗದಲ್ಲಿ ವಾಹನದ ನಿಜವಾದ ನಂಬರ್ ಪ್ಲೇಟ್ ಬಳಸಿದ್ದರು.ವಿವಿಧ ಟೋಲ್ಗೇಟ್ ಸಂಪರ್ಕಿಸಿ ಫಾಸ್ಟ್ಯಾಗ್ ಮೂಲಕ ವಾಹನ ಸಾಗಿದ ಮಾರ್ಗವನ್ನು ಕಂಡು ಹಿಡಿದ ಪೊಲೀಸರು 4 ಗಂಟೆಯಲ್ಲಿ 250 ಕಿ.ಮೀ ಕ್ರಮಿಸಿದ್ದರು. ಬೆಂಗಳೂರಿನ ತೆಲಂಗಾಣ ಗಡಿಭಾಗಕ್ಕೆ ತೆರಳಿ ಬಳಿಕ ಮಹಾರಾಷ್ಟ್ರದಿಂದ ಮದ್ಯಪ್ರದೇಶಕ್ಕೆ ತೆರಳುವ ಮಾಹಿತಿ ಪಡೆದ ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ಮಹಾರಾಷ್ಟ್ರದ ದುಬೆ ಜಿಲ್ಲೆಯ ಸೋನಗಿರ್ ಎನ್ನುವ ಟೋಲ್ಗೇಟ್ ಬಳಿ ವಾಹನ ತಡೆದಿದ್ದಾರೆ. ಈ ವೇಳೆ ದರೋಡೆಕೋರರು ಪೊಲೀಸರ ಮೇಲೆ ವಾಹನ ಹಾಯಿಸಿ ಹಲ್ಲೆ ಮಾಡಲು ಮುಂದಾಗಿದ್ದರು. ಅಂತಿಮವಾಗಿ ಎಲ್ಲಾ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಬೈಂದೂರು ವೃತ್ತ ನಿರೀಕ್ಷಕರ ಕಾರ್ಯಾಚರಣೆಗೆ ಮೆಚ್ಚುಗೆ:
ಕೇವಲ ನಾಲ್ಕು ದಿನದಲ್ಲಿ ಕಳವುಗೈದ ಸಂಪೂರ್ಣ ಚಿನ್ನ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಆನಂದ ಕಾಯ್ಕಿಣಿ ಅವರ ಪಾತ್ರ ದೊಡ್ಡದಿದೆ ಎನ್ನಲಾಗಿದೆ. ತಕ್ಷಣ ವಿವಿಧ ಟೋಲ್ಗೇಟ್ ಸಂಪರ್ಕ ಸಾಧಿಸಿ ಎಲ್ಲಾ ವಾಹನಗಳ ವಿವರ ಪಡೆದು ಕಳವಿಗೆ ಬಳಸಿದ ವಾಹನದ ನಿಖರತೆ ಪತ್ತೆ ಹಚ್ಚಿ ಮಹಾರಾಷ್ಟ್ರ ಕ್ರೈಮ್ ಪೊಲೀಸ್ ಸಂಜೀವ ಪಾಟೀಲ್ ತಂಡದ ಸಹಕಾರದೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ. ಕೆಲವೆ ದಿನಗಳ ಹಿಂದೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಎಲ್ಲೂರು ಬಳಿ ಚಿನ್ನಾಭರಣ ಕದ್ದು ಪರಾರಿಯಾದ ಆರೋಪಿಯನ್ನು ಮಹಾರಾಷ್ಟ್ರದಿಂದ ಬಂಧಿಸಿ ಕರೆತರಲಾಗಿತ್ತು.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಬೈಂದೂರು ಪಿಸ್ಐ ಪವನ್ ನಾಯಕ್, ಗಂಗೊಳ್ಳಿ ಪಿಎಸ್ಐ ವಿನಯ್, ಆರಕ್ಷಕರಾದ ಮೋಹನ್ ಪೂಜಾರಿ ಶಿರೂರು, ನಾಗೇಂದ್ರ ಬೈಂದೂರು, ಶ್ರೀಧರ, ನಾಗೇಶ್ ಗೌಡ, ಸುಜೀತ್ ಕುಮಾರ್, ಶ್ರೀನಿವಾಸ ಉಪ್ಪುಂದ, ಪ್ರಿನ್ಸ್ ಶಿರೂರು, ಚಂದ್ರ ಮುಂತಾದವರು ಭಾಗಿಯಾಗಿದ್ದರು.