ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭೂಮಂಡಲದಲ್ಲಿ ಅನೇಕ ಜೀವರಾಶಿಯನ್ನು ಸೃಷ್ಠಿಸಿದ ದೇವರು ಮನುಷ್ಯನನ್ನು ಮಾತ್ರ ಶೇಷ್ಠ ಜೀವಿ ಎಂದು ಪರಿಗಣಿಸಿ ಪ್ರಕೃತಿಯ ರಕ್ಷಣೆ ಜತೆಗೆ ವಿವಿಧ ಜೀವಸಂಕುಲಗಳ ರಕ್ಷಣೆಯ ಜವಾಬ್ದಾರಿ ನೀಡಿದ್ದಾನೆ. ಹಾಗಾಗಿ ಮನುಷ್ಯರು ಸನ್ಮಾರ್ಗದಲ್ಲಿ ಸಾಗುವ ಮೂಲಕ ಸತ್ಕಾರ್ಯಗಳನ್ನು ಮಾಡಿ ಜೀವನದ ಸಾರ್ಥಕತೆಯನ್ನು ಕಾಣಬೇಕು ಎಂದು ಜಿಲ್ಲಾ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.
ಉಪ್ಪುಂದದ ಇಂದಿರಾ ಗಾಣಿಗ ಇವರಿಗೆ ಇಲ್ಲಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ನೂತನ ಗೃಹದ ಕೀಲಿಕೈಯನ್ನು ಫಲಾನುಭವಿಗೆ ಹಸ್ತಾಂತರಿಸಿ ಮಾತನಾಡಿದರು. ಸತ್ಪಾತ್ರರಿಗೆ ಮಾಡಿದ ದಾನ ಪರಿಪೂರ್ಣ ಎಂದೆನಿಕೊಳ್ಳುತ್ತದೆ. ಅದೇ ರೀತಿ ಟ್ರಸ್ಟಿನ ಅಧ್ಯಕ್ಷ, ಉದ್ಯಮಿ ಗೋವಿಂದ ಬಾಬು ಪೂಜಾರಿ ಇವರು ತನ್ನ ಸಂಪಾದನೆಯ ಒಂದು ಭಾಗವನ್ನು ಈ ಭಾಗದ ಬಡವರ ಅಭ್ಯುದಯಕ್ಕಾಗಿ ವಿನಿಯೋಗಿಸುತ್ತಿರುವುದು ದೇವರಿಗೂ ಪ್ರೀಯವಾದ ಕಾರ್ಯವಾಗಿದೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಇವರು ತಮ್ಮ ಸತ್ಕಾರ್ಯಗಳ ಮೂಲಕ ಶ್ರೇಷ್ಠ ಮಾನವರಲ್ಲಿ ಒಬ್ಬರಾಗಿದ್ದಾರೆ ಎಂದರು.

ಕೇರಳದ ಶಿವಗಿರಿ ಮಠದ ಪೀಠಾಧಿಪತಿ ಸತ್ಯಾನಂದ ಸ್ವಾಮೀಜಿ ನೂತನ ಗೃಹವನ್ನು ಉದ್ಘಾಟಿಸಿದರು. ಗಾಣಿಗ ಸಮುದಾಯದವರು ಡಾ. ಗೋವಿಂದ ಬಾಬು ಪೂಜಾರಿ ಜನ್ಮದಿನವನ್ನು ಆಚರಿಸಿ ಸನ್ಮಾನಿಸಿದರು. ಉಡುಪಿ ಜಿಲ್ಲಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕ ಡಾ. ನಾರಾಯಣ ಶೆಣೈ, ರಾಜ್ಯ ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್, ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ ಉಪಸ್ಥಿತರಿದ್ದರು. ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ಇದು ಟ್ರಸ್ಟ್‌ನ ವತಿಯಿಂದ ನಿರ್ಮಾಣ ಮಾಡಲಾಗಿರುವ ಎಂಟನೇ ಮನೆಯಾಗಿದೆ.
* ಮಾನವನ ಸೇವೆ ಎಂದರೆ ಅದು ಮಾಧವನ ಸೇವೆ. ಸಮಾಜ ಸೇವೆಯೇ ಮಾನವ ಧರ್ಮ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶವನ್ನು ಮೈಗೂಡಿಸಿಕೊಂಡು ಎಲ್ಲಾ ಒಂದೇ ಮಾನವ ಜಾತಿ ಎಂಬ ನೆಲೆಯಲ್ಲಿ ಡಾ. ಗೋವಿಂದ ಬಾಬು ಪೂಜಾರಿಯವರು ಬಡವರ ಪಾಲಿಗೆ ಸಂಜೀವಿನಿಯಾಗಿದ್ದಾರೆ. – ಶ್ರೀ ಸತ್ಯಾನಂದ ಸ್ವಾಮೀಜಿ, ಶಿವಗಿರಿ ಮಠ ಕೇರಳ