ಬೈಂದೂರು: ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಮಣಿಪಾಲ ಲಯನ್ಸ್ ಮತ್ತು ಲಯನೆಸ್ ಕ್ಲಬ್, ದುಬೈಯ ದಿನೇಶ ದೇವಾಡಿಗ ಫ್ಯಾಮಿಲಿ ಟ್ರಸ್ಟ್ ಮತ್ತು ನಾವುಂದ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಮಂಜುನಾಥ ಆಸ್ಪತ್ರೆಯ ನೆರವಿನೊಂದಿಗೆ ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಶಕೀಲಾ ರಾಜಕುಮಾರ್ ದೇಹದ ಅತ್ಯಂತ ಸೂಕ್ಷ್ಮ ಅಂಗವಾದ ಕಣ್ಣಿನ ಆರೋಗ್ಯದ ಕಡೆಗೆ ಎಚ್ಚರ ಇರಬೇಕು. ಆಗಾಗ ತಪಾಸಣೆ ಮಾಡಿಸಿಕೊಂಡು, ಚಿಕ್ಕ ಸಮಸ್ಯೆ ಕಂಡುಬಂದರೂ ತಜ್ಞರ ಸಲಹೆ, ಚಿಕಿತ್ಸೆ ಪಡೆಯಬೇಕು. ಶಿಬಿರಗಳಲ್ಲಿ ತಪಾಸಣೆಯ ಜತೆಗೆ ಕಣ್ಣಿನ ಆರೋಗ್ಯದ ಬಗೆಗೆ ಮಾಹಿತಿ ಸಿಗುವುದರಿಂದ ಅದರ ಬಗ್ಗೆ ಕೀಳಂದಾಜು ಸರಿಯಲ್ಲ. ಮಕ್ಕಳಿಗೆ ವೈದ್ಯರು ಕನ್ನಡಕ ಬಳಸಲು ಹೇಳಿದಾಗ ಅನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಹೇಳಿದರು.
ಸ್ವಾಗತಿಸಿದ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಬಿ. ಜಿ. ಮೋಹನದಾಸ್ ಬೆಸ್ಕೂರ್ ’ದೃಷ್ಟಿಗೆ ಆದ್ಯತೆ’ ಎನ್ನುವುದು ಲಯನ್ಸ್ ಸಂಸ್ಥೆಯ ಮಹತ್ವದ ಧ್ಯೇಯ. ಆದುದರಿಂದ ವರ್ಷದಲ್ಲಿ ಹತ್ತಾರು ಇಂತಹ ಶಿಬಿರ ಏರ್ಪಡಿಸಲಾಗುತ್ತಿದೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ವಂದಿಸಿದರು.
ಡಾ. ಶಕೀಲಾ ರಾಜಕುಮಾರ್ ಮತ್ತು ಡಾ. ಸಚಿನ್ ರಾಜಕುಮಾರ್ ಶಿಬಿರಕ್ಕೆ ಬಂದ ೧೯೦ ಜನರ ಕಣ್ಣಿನ ತಪಾಸಣೆ ನಡೆಸಿದರು.100 ಜನರಿಗೆ ಕನ್ನಡಕ ವಿತರಿಸಲಾಯಿತು ಮತ್ತು ೩೦ ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಲಯನೆಸ್ ಕ್ಲಬ್ ಅಧ್ಯಕ್ಷೆ ಯಶೋದಾ ಮೋಹನದಾಸ್, ಕಾರ್ಯದರ್ಶಿ ಡಾ. ದೀಪಾ ಪಟವಾಲ್, ಲಯನ್ಸ್ ಪೂರ್ವಾಧ್ಯಕ್ಷರಾದ ಡಾ. ಗಣೇಶ ಪೈ, ಕೇಶವರಾಯ ಪೈ, ನಾಗೇಶ ಕಾಮತ್, ಮಣಿಪಾಲ ವಿಶ್ವವಿದ್ಯಾಲಯ ಲಯನ್ಸ್ ಕ್ಲಬ್ ಅಧ್ಯಕ್ಷ ಯಶ್ ಸ್ವಾಯ್ಕ್, ಬೈಂದೂರು ಡಾಟ್‌ಕಾಂನ ವ್ಯವಸ್ಥಾಪಕ ಬಿ. ಜಿ. ಕಮಲೇಶ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ ಹೆಬ್ಬಾರ್ ಉಪಸ್ಥಿತರಿದ್ದರು.