ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.07: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ತಾಲೂಕಿನ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ಪರಿಣಾಮವಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸಾಲ್ಬುಡ, ಕುದ್ರು ಪ್ರದೇಶ ಮುಳುಗಡೆಯಾಗಿದ್ದು, ಸಾಲ್ಬುಡದ ಕುದ್ರು ಗ್ರಾಮದ ಸಂತ್ರಸ್ತರನ್ನು ಎಸ್.ಡಿ.ಆರ್.ಎಫ್ ತಂಡ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಮರವಂತೆ, ಬಡಾಕೆರೆ ಮೊದಲಾದ ಪ್ರದೇಶಗಳಲ್ಲಿಯೂ ನೆರೆ ಕಾಣಿಸಿಕೊಂಡಿದೆ. ನೆರೆಯಿಂದಾಗಿ ಜನರು ಸಂಚಾರಕ್ಕೆ ದೋಣಿಗಳನ್ನು ಬಳಸುವಂತಾಗಿದೆ.
ಪಂಚಗಂಗಾವಳಿ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಹಲವೆಡೆ ನೆರೆ ಕಾಣಿಸಿಕೊಂಡಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಜು.6ರಂದು ಮಳೆಯಿಂದಾಗಿ ಗಂಗೊಳ್ಳಿ, ಹೊಸಂಗಡಿ, ಬಸ್ರೂರು, ಯಡ್ಯಾಡಿ ಮತ್ಯಾಡಿ, ಕುಳಂಜೆ, ಅಂಪಾರು, ಕೊರ್ಗಿ, ಸಿದ್ದಾಪುರ, ಹೆಮ್ಮಾಡಿ, ಗಂಗೊಳ್ಳಿ, ತೆಕ್ಕಟೆ, ಶಿರೂರು, ನಾವುಂದ ಗ್ರಾಮದ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಅಂದಾಜು 6.25 ಲಕ್ಷ ರೂ. ಹಾನಿಯಾದ ಬಗ್ಗೆ ವರದಿಯಾಗಿದೆ.
ಇನ್ನು ಮರವಂತೆ, ಕಿರಿಮಂಜೇಶ್ವರ, ಗಂಗೊಳ್ಳಿಯ ಕೆಲ ಭಾಗಗಳಲ್ಲಿ ಕಡಲಕೊರೆತ ಕಾಣಿಸಿಕೊಂಡಿದ್ದು, ಸಮುದ್ರ ತಡದ ಜನರು ಭಯದಿಂದ ಬದುಕುವಂತಾಗಿದೆ. ಮರವಂತೆಯನ್ನು ಹೆಚ್ಚಿನ ಕಡಲಕೊರೆತ ಕಾಣಿಸಿಕೊಂಡಿದ್ದು, ತೆಂಗಿನ ಮರಗಳು, ರಸ್ತೆ ಸಮುದ್ರ ಪಾಲಾಗಿದೆ. ಸ್ಥಳೀಯರು ತಾತ್ಕಾಲಿಕವಾಗಿ ಮರವಂತೆ ಭಾಗದಲ್ಲಿ ತಡೆಗೋಡೆ ನಿರ್ಮಿಸಿದ್ದರೂ, ಸಮುದ್ರದ ರಕ್ಕಸದಲೆಗಳು ನಡುಕ ಹುಟ್ಟಿಸಿದೆ.
ತಗ್ಗುಪ್ರದೇಶಗಳ ಜನರು ಎಚ್ಚರ ವಹಿಸುವಂತೆ, ಕೃಷಿ ಕಾಯಕದಲ್ಲಿ ತೊಡಗುವವರು ಎಚ್ಚರದಿಂದಿರುವಂತೆ ಹಾಗೂ ಪ್ರವಾಸಿಗರು ನದಿ ಹಾಗೂ ಸಮುದ್ರ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಸಿದೆ. ಶಾಲಾ ಕಾಲೇಜುಗಳಿಗೆ ಜು.08 ಹಾಗೂ 09ರಂದು ಮುಂಜಾಗೃತಾ ಕ್ರಮವಾಗಿ ರಜೆ ಘೋಷಿಸಿದೆ.





















