ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ದೇಶದ ಜ್ಞಾನದ ಪರಂಪರೆಯನ್ನು ಕಂಡು ವಿಶ್ವವೇ ನಮಗೆ ಸೋತಿತು. ಭಾರತೀಯರ ಇತರರ ಮೇಲೆ ಆಕ್ರಮಣಗೈದು ವಿಶ್ವಗುರುವಾಗಲಿಲ್ಲ. ಇಲ್ಲಿನ ಜ್ಞಾನ ಪರಂಪರೆಯಿಂದಷ್ಟೇ ಅದು ಸಾಧ್ಯವಾಯಿತು ಎಂದು ಉಡುಪಿ ಜಿಲ್ಲಾ ಶಾರೀರಿಕ್ ಪ್ರಮುಖ್ ಪ್ರಶಾಂತ್ ಅರೆಶಿರೂರು ಹೇಳಿದರು.
ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೈಂದೂರು ಮಂಡಲದ ವತಿಯಿಂದ ಇಲ್ಲಿನ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಗುರುಪೂಜಾ ಉತ್ಸವದಲ್ಲಿ ಬೌದ್ಧಿಕ್ನಲ್ಲಿ ಮಾತನಾಡಿ ಮಹರ್ಷಿ ವ್ಯಾಸರನ್ನು ಎಲ್ಲರೂ ಆದಿಗುರು ಎನ್ನುತ್ತಾರೆ. ಅವರ ಜನ್ಮಜಯಂತಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುರುಪೂರ್ಣಿಮೆ ಉತ್ಸವ ಆಚರಿಸುತ್ತೇವೆ. ಸ್ವಾವಲಂಬಿಯಾಗಿ ಬದುಕು ಎಂಬ ನಮ್ಮ ಪರಂಪರೆಯಲ್ಲಿ ಗುರಿವಿಗೆ ಮಾತ್ರವೇ ಗುಲಾಮನಾಗು ಎಂಬ ಸಂದೇಶ ನೀಡಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಅದಕ್ಕೆ ಪ್ರಮುಖ್ಯತೆ ಇದೆ ಎಂದರು. ಸಮಾಜದ ಮೇಲೆ ಆಕ್ರಮಣಗಳಾದಾಗ ಅದನ್ನು ಬಡಿದೆಬ್ಬಿಸುವ ಕಾರ್ಯವನ್ನು ಗುರು ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ನಾಗರಾಜ ಖಾರ್ವಿ ಮಾತನಾಡಿ ಇಂದಿನ ಯುವ ಜನಾಂಗ ಸಾಮಾಜಿಕ ಸ್ಥಿತ್ಯಂತರಗಳ ಕಾರಣದಿಂದ ಮುಖ್ಯಭೂಮಿಕೆಯಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಅವರನ್ನು ಒಂದೇ ಉದ್ದೇಶದಡಿಯಲ್ಲಿ ಒಂದುಗೂಡಿಸುವುದು ಹಾಗೂ ದೇಶಿಯ ಚಿಂತನೆಯನ್ನು ಮೂಡಿಸುವುದು ಬಹುಮುಖ್ಯವಾದುದು ಎಂದರು.
ನೂರಾರು ಸ್ವಯಂ ಸೇವಕರು ಭಗವಾಧ್ವಜಕ್ಕೆ ಪ್ರಣಾಮ್ ಸಲ್ಲಿಸಿ ಹೂವು ಹಾಗೂ ಮಂತ್ರಾಕ್ಷತೆಗಳಿಂದ ಅರ್ಚಿಸಿ, ಗುರುಕಾಣಿಕೆ ಅರ್ಪಿಸಿದರು.