ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಎಲ್ಲಕ್ಕಿಂತ ಶ್ರೇಷ್ಠವಾದುದು ನಿಸ್ಚಾರ್ಥ ಸೇವೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ರಾಮಕ್ಷತ್ರಿಯ ಸಮುದಾಯದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶ್ರೀ ರಾಮ ವಿವಿಧೋದ್ಧೇಶ ಟ್ರಸ್ಟ್ ಜುಲೈ.24ರ ಭಾನುವಾರ ಹತ್ತನೇ ವರ್ಷದ ಟ್ರಸ್ಟ್ ದಿನಾಚರಣೆ ಆಚರಿಸಲಿದೆ ಎಂದು ಆಡಳಿತ ಟ್ರಸ್ಟೀ ಬಿಜೂರು ರಾಮಕೃಷ್ಣ ಶೇರುಗಾರ್ ಹೇಳಿದರು.
ಬೈಂದೂರಿನಲ್ಲಿ ಶನಿವಾರ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಬೈಂದೂರು ಪರಿಸರದ ರಾಮಕ್ಷತ್ರಿಯ ಸಮುದಾಯದ ವಿದ್ಯಾರ್ಥಿಗಳು, ವಿಧವೆಯರು, ವಸತಿ ರಹಿತರು, ಅಶಕ್ತರು, ಅನಾಥರು, ರೋಗಿಗಳ ಹಾಗೂ ಬಡವರ ಸಹಾಯಕ್ಕಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಗತ್ಯ ಸಹಕಾರ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಕಳೆದ ಹತ್ತು ವರ್ಷಗಳಿಂದ ಟ್ರಸ್ಟ್ ಕಾರ್ಯಪ್ರವೃತ್ತವಾಗಿದೆ ಎಂದರು.
2012 ರಿಂದ ಈ ವರೆಗೆ 20 ಮಂದಿ ಟ್ರಸ್ಟಿಗಳನ್ನು ಒಳಗೊಂಡು ಕಾರ್ಯಾಚರಿಸುತ್ತಿರುವ ಸಂಸ್ಥೆಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಶ್ರೀ ರಾಮ ಪ್ರತಿಭಾ ಪುರಸ್ಕಾರ ಯೋಜನೆಯ ಮೂಲಕ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಹಾಗೂ ಪದವಿ ತರಗತಿಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಬೈಂದೂರು ಪರಿಸರದ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೊತ್ಸಾಹಿಸಲಾಗುತ್ತಿದೆ. 8ನೇ ತರಗತಿಯಿಂದ ಪದವಿ ತರಗತಿಯ ವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಶ್ರೀ ರಾಮ ಶೈಕ್ಷಣಿಕ ದತ್ತು ಯೋಜನೆಯ ಮೂಲಕ ಪ್ರತಿಭಾವಂತರಾಗಿದ್ದು ಆರ್ಥಿಕ ತೊಂದರೆಯಲ್ಲಿರುವ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಸಂಪೂರ್ಣ ಅಥವಾ ಭಾಗಶಃ ಶಿಕ್ಷಣದ ಖರ್ಚನ್ನು ಭರಿಸಿ ಅವರ ಗುರಿ ತಲುಪಲು ಸಹಕರಿಸುವ ಕಾರ್ಯ ಮಾಡಲಾಗುತ್ತಿದೆ. ಈ ವರೆಗೆ ಎರಡು ಮಂದಿಯ ವೈದ್ಯಕೀಯ ಶಿಕ್ಷಣಕ್ಕೆ, ಏಳು ಮಂದಿಯ ಇಂಜಿನಿಯರಿಂಗ್ ಶಿಕ್ಷಣಕ್ಕೆ, ಎರಡು ಮಂದಿಯ ನರ್ಸಿಂಗ್ ಶಿಕ್ಷಣಕ್ಕೆ, ಐದು ಮಂದಿಯ ಸ್ನಾತಕೋತ್ತರ ಪದವಿಗೆ, 22 ಮಂದಿಯ ಪದವಿ ಹಾಗೂ ಇತರೆ ಶಿಕ್ಷಣಕ್ಕೆ ನೆರವು ನೀಡಲಾಗಿದೆ.
ಶ್ರೀ ರಾಮ ಗೃಹ ನಿರ್ಮಾಣ ಯೋಜನೆ ಮೂಲಕ ಕಡು ಬಡತನದಲ್ಲಿದ್ದು ಅನೇಕ ಕಾರಣಗಳಿಂದ ಮನೆ ಕಟ್ಟಿಸಿಕೊಳ್ಳಲು ಆಗದೆ ಇರುವವರಿಗೆ ಅವರ ವಾಸಕ್ಕೆ ಯೋಗ್ಯವಾದ ಸಂಪೂರ್ಣ ಮನೆಯ ನಿರ್ಮಾಣ ಹಾಗೂ ಭಾಗಶಃ ಧನಸಹಾಯ ಕಾರ್ಯ ಮಾಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ 6 ಸಂಪೂರ್ಣ ಮನೆ ನಿರ್ಮಾಣಕ್ಕೆ ಸುಮಾರು 30 ಲಕ್ಷ ಹಾಗೂ 17 ಭಾಗಶಃ ಮನೆಯ ನಿರ್ಮಾಣಕ್ಕೆ ಸುಮಾರು 25 ಲಕ್ಷದ ನೆರವು ನೀಡಿ ಮನೆಗಳನ್ನು ಕಟ್ಟಿಸಿಕೊಟ್ಟಿರುತ್ತೇವೆ. ಶ್ರೀ ರಾಮ ಮನೆದೀಪ ಯೋಜನೆಯ ಮೂಲಕ ವಿದ್ಯುತ್ ಸಂಪರ್ಕವಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಈ ಯೋಜನೆಯಡಿಯಲ್ಲಿ 8 ಮನೆಗಳಿಗೆ 3 ಲಕ್ಷಕ್ಕೂ ಹೆಚ್ಚು ವಿನಿಯೋಗಿಸಿ ಬೆಳಕಿನ ಭಾಗ್ಯ ನೀಡಲಾಗಿದೆ.
ಶ್ರೀ ರಾಮ ವಿಧವಾ ಆಸರೆ ಯೋಜನೆ ಮೂಲಕ ಪ್ರತೀ ತಿಂಗಳಿಗೆ ರೂಪಾಯಿ ರೂ.400ರಂತೆ 45 ಮಂದಿ ವಿಧವೆಯರು ಮಾಶಾಸನ ಪಡೆಯುತ್ತಿದ್ದಾರೆ. ಇವರಿಗಾಗಿ ನಾವು ವಾರ್ಷಿಕ 2,16,000 ವನ್ನು ನೀಡಿತ್ತಿದ್ದೇವೆ. ಶ್ರೀ ರಾಮ ಅನಾಥ ಹಾಗೂ ಆಶಕ್ತ ಸುರಕ್ಷಾ ಯೋಜನೆ ಮೂಲಕ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ 5 ಮಂದಿ ಮಕ್ಕಳಿಗೆ ಹಾಗೂ ಮಾರಣಾಂತಿಕ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡಲಾಗುತ್ತಿದೆ.
ಇದಲ್ಲದೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆಗಾಗಿ ಪ್ರೇರಣಾ ಶಿಬಿರ, ಸಾರ್ವಜನಿಕರಿಗೆ ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಶಿಬಿರ ಪರಿಸರ ಸಂರಕ್ಷಣೆಗಾಗಿ ವನಮಹೋತ್ಸವ, ಸಸಿ ವಿತರಣೆ ಮತ್ತು ಸ್ವಚ್ಛತಾ ಅಭಿಯಾನವನ್ನು ಟ್ರಸ್ಟ್ ಮೂಲಕ ಆಯೋಜಿಸಲಾಗಿದೆ. ಚಾರಿಟೇಬಲ್ ಟ್ರಸ್ಟ್ ಎಂದು ಮಾನ್ಯತೆ ಪಡೆದ ಸಂಸ್ಥೆಯು 80ಜಿ ಆದಾಯ ತೆರಿಗೆ ವಿನಾಯಿತಿ ಹೊಂದಿದೆ ಎಂದರು.
ಜುಲೈ 24ರ ಭಾನುವಾರ ನಡೆಯಲಿರುವ 10ನೇ ವರ್ಷದ ಟ್ರಸ್ಟ್ ದಿನಾಚರಣೆಯಲ್ಲಿ ಹಲವು ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ವಿತರಣೆ, ವಿದ್ಯಾರ್ಥಿಗಳಿಗೆ ಮತ್ತು ದಾನಿಗಳಿಗೆ ಅಭಿನಂದಿಸುವ ಕಾರ್ಯಕ್ರಮ ಜರುಗಲಿರುವುದು ಎಂದವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟೀಗಳಾದ ವೆಂಕಟರಮಣ ಬಿಜೂರು, ಕೃಷ್ಣಯ್ಯ ಮದ್ದೋಡಿ, ಸಂಚಾಲಕರಾದ ಆನಂದ ಮದ್ದೋಡಿ, ಕೇಶವ ನಾಯಕ್ ಬಿಜೂರು ಉಪಸ್ಥಿತರಿದ್ದರು.















