ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಶುಕ್ರವಾರ ಉಪ್ಪುಂದ ಮಾತೃಶ್ರೀ ಸಭಾಭವನಧಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಮೀನುಗಾರಿಕಾ ಋತುವು ಸಂಪದ್ಭರಿತವಾಗಿರಲೆಂದು ಹಾರೈಸಿ ಸಂಘದ ಪ್ರತಿಯೊಬ್ಬ ಸದಸ್ಯರು ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಿ, ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನು ನೀಡುವುದರ ಮುಖೇನ ಸಂಘದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.
ಇದೇ ಸಂಧರ್ಭ ಅಕಾಲಿಕ ಮರಣ ಹೊಂದಿದ ಸಂಘದ ಸದಸ್ಯರಾದ ನಾಗರಾಜ ಮೊಗವೀರ, ಜಯರಾಮ ಖಾರ್ವಿ, ರಾಮ ಖಾರ್ವಿ, ಪುರುಷೋತ್ತಮ ಖಾರ್ವಿ ಇವರ ವಾರೀಸುದಾರರಿಗೆ ತಲಾ ರೂ.1,95,000/- ಮೀನುಗಾರಿಕೆ ಸಂಧರ್ಭ ಮೃತರಾದ ಸಂಘದ ಸದಸ್ಯರಾದ ರಾಮದಾಸ ಖಾರ್ವಿ, ಇವರ ವಾರೀಸುದಾರರಿಗೆ ರೂ.1,50,000/- ಮತ್ತು ಪಟ್ಟೆಬಲೆ ದೋಣಿ ಸದಸ್ಯರಾದ ಚರಣ್ ರಾಜ್ ಖಾರ್ವಿ ಮತ್ತು ಅಣ್ಣಪ್ಪ ಮೊಗವೀರ, ಇವರ ವಾರೀಸುದಾರರಿಗೆ ತಲಾ ರೂ.50,000/- ಮರಣೋತ್ತರ ನಿಧಿ ಚೆಕ್ ಹಾಗೂ ಅರೆಹಾಡಿ ಹಿಂದು ರುದ್ರಭೂಮಿ ನಿರ್ವಹಣಾ ಸಮಿತಿ ಅಭಿವೃದ್ದಿಗೆ ರೂ.50,000/- ದೇಣಿಗೆ ಚೆಕ್ ಹಸ್ತಾಂತರಿಸಲಾಯಿತು.
ಭಾರತೀಯ ಭೂ-ಸೇನೆಯಲ್ಲಿ ಸುದೀರ್ಘ 17 ವರ್ಷ ಸೈನಿಕರಾಗಿ ಸೇವೆ ಸಲ್ಲಿಸಿದ ರಾಘವ ಖಾರ್ವಿ ದೊಂಬೆ ಮತ್ತು ಅಂಬಾದಾಸ ಖಾರ್ವಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭ ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಪ್ರಧಾನ ಕಾರ್ಯದರ್ಶಿ ಸುರೇಶ ಖಾರ್ವಿ, ಕೋಶಾಧಿಕಾರಿ ಬಿ. ನಾಗೇಶ ಖಾರ್ವಿ, ಜೊತೆ ಕಾರ್ಯದರ್ಶಿ ಸೋಮಶೇಖರ ಖಾರ್ವಿ, ಕಾರ್ಯಕಾರಿ ಸದಸ್ಯರಾದ ಎ. ಶ್ರೀನಿವಾಸ ಖಾರ್ವಿ, ಎಸ್. ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ ಖಾರ್ವಿ, ಶರತ್ ಖಾರ್ವಿ ಉಪಸ್ಥಿತರಿದ್ದರು. ರವೀಂದ್ರ ಖಾರ್ವಿ ಇವರು ಪ್ರಾರ್ಥನೆಗೈದು, ಸುಬ್ರಹ್ಮಣ್ಯ ಎಂ. ನಿರೂಪಿಸಿದರು.