ಕೋಟ: ನಾವು ಬದುಕುವ ವಿಧಾನವನ್ನು ಸಂಸ್ಕೃತಿ ಎನ್ನಬಹುದು. ಒಳ್ಳೆಯದಕ್ಕೆ ಹತ್ತಿರವಾಗಿ ಕೆಟ್ಟದರಿಂದ ದೂರ ಉಳಿದು ಬದುಕುವುದು ಸಂಸ್ಕೃತಿ. ಸಂಸ್ಕೃತಿಯ ಪ್ರೀತಿ ನಮಗೆ ಬದುಕಿನಲ್ಲಿ ಜೀವನ ಪ್ರೀತಿಯನ್ನು ನೀಡುತ್ತದೆ. ನಮ್ಮಲ್ಲಿ ಒಳ್ಳೆಯ ತನವನ್ನು ವೃದ್ಧಿಕೊಳ್ಳಲು ಸಹಕಾರ ಮಾಡುತ್ತದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಎಂ. ಹೇಳಿದರು.
ಅವರು ಗುರುವಾರ ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದ ಮೊದಲನೇ ದಿನವಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಲೇಖಕಿಯರ ಸಂಘ ಉಡುಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಉಡುಪಿ, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಮಹಿಳಾ ಸಾಹಿತ್ಯ ಸಮಾವೇಶ ಚೇತನಾ ಮೃದು ಮಾತಿನ ರಿಂಗಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಚಿಂತಕಿ ತ್ರಿಪುರ ಸುಂದರಿ ಬಲ್ಲಾಳ ಅವರು ಚೆಂಡೆ ಬಾರಿಸುವ ಮೂಲಕ ಸಾಂಸ್ಕೃತಿಕ ಸುಗ್ಗಿ ಅನಾವರಣಗೊಳಿಸಿ ಮಾತನಾಡಿ, ಮಕ್ಕಳ ಎಳವೆಯಿಂದಲೇ ನಮ್ಮ ಸಂಸ್ಕೃತಿ, ದೇವರ ಬಗ್ಗೆ ಆಸಕ್ತಿ ಮೂಡಿಸಬೇಕು. ಮಹಾನ್ ವ್ಯಕ್ತಿಗಳ ಪರಿಚಯವನ್ನು ಮಾಡಿಸುವುದರಿಂದ, ಹಿರಿಯರ ಆದರ್ಶಗಳು ಭವಿಷ್ಯದಲ್ಲಿ ಮಕ್ಕಳಿಗೆ ದಾರಿ ದೀಪವಾಗುತ್ತದೆ ಎಂದರು.
ಗೀತಾ ಆನಂದ ಸಿ.ಕುಂದರ್ ಅವರು ಅಂತರಾಷ್ಟ್ರೀಯ ಖ್ಯಾತಿಯ ಸತೀಶ ಆಚಾರ್ಯ ಅವರ ಕಾರ್ಟೂನ್ ಪ್ರದರ್ಶನ ಅನಾವರಗೊಳಿಸಿದರು. ಹಿರಿಯ ಸಾಹಿತಿ ಶ್ರೀಮತಿ ವಸಂತಿ ಶೆಟ್ಟಿ ಸಮಾವೇಶದ ಅಧ್ಯಕ್ಷತೆವಹಿಸಿದ್ದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ರಾಜಾರಾಮ್, ಶ್ಯಾಮಲ ಪಿ., ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಶ್ರೀಮತಿ ವಸಂತಿ ಶೆಟ್ಟಿ ಮತ್ತಿತತರನ್ನು ಪ್ರತಿಷ್ಠಾನವತಿಯಿಂದ ಗೌರವಿಸಲಾಯಿತು. ಕೋಟತಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಗೌರವಾರ್ಪಣೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯ ಚಿಂತಕ ಡಾ.ನಿಕೇತನ ಅವರಿಂದ ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆ ವಿಶೇಚ ಉಪನ್ಯಾಸ, ಯುವ ಲೇಖಕಿ ಪೂರ್ಣಿಮಾ ಎನ್.ಭಟ್ ಅವರಿಂದ ಜನಪದ ಮತ್ತು ಮಹಿಳೆ ವಿಚಾರವಾಗಿ ಪ್ರಬಂಧ ಮಂಡನೆ, ಹಿರಿಯ ಲೇಖಕಿ ಇಂದಿರಾ ಹಾಲಂಬಿ ಅವರಿಂದ ಕಾರಂತ ಕಂಡಂತೆ ಕೆಲವು ಅನಿಸಿಕೆಗಳು, ಹಿರಿಯ ಲೇಖಕಿ ಜ್ಯೋತಿ ಗುರು ಪ್ರಸಾದ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಬಳಿಕ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ನೃತ್ಯ ವೈಭವ ನಡೆಯಿತು. ಹಿರಿಯ ಲೇಖಕಿ ಪಾರ್ವತಿ ಜಿ.ಐತಾಳ್ ಸಮಾರೋಪ ಭಾಷಣ ಮಾಡಿದರು.