ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.29: ವಿದ್ಯಾರ್ಥಿಗಳು ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು. ಪ್ರಾಥಮಿಕ ಹಂತದಲ್ಲಿ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಶಾಲೆ ಉತ್ತಮ ವೇದಿಕೆಯಾಗಿದ್ದು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು.ಬಿ. ಶೆಟ್ಟಿ ಹೇಳಿದರು.
ಬೈಂದೂರು ಯು. ಬಿ. ಶೆಟ್ಟಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಆತ್ಮವಿಶ್ವಾಸದ ಜತೆಗೆ ಸೇವಾ ಮನೋಭಾವ ಮೂಡಿಸುವ ಕೆಲಸವಾಗಬೇಕು. ವ್ಯಕ್ತಿತ್ವ ವಿಕಸನದ ಮೂಲಕ ಮನವೀಯತೆಯ ಮೌಲ್ಯ ರೂಪಿಸಿ ಸಮಾಜದಲ್ಲಿ ನಿಸ್ವಾರ್ಥ ಸೇವೆ ಗೈಯುವಂತೆ ಮಾಡುವಲ್ಲಿ ಅವರಿಗೆ ಉತ್ತಮ ಮಾರ್ಗದರ್ಶನದ ಮೂಲಕ ಸರಿಯಾದ ದಾರಿಯಲ್ಲಿ ನಡೆಸುತ್ತಿರುವ ಶಿಕ್ಷಕರ ಪಾತ್ರ ಶ್ಲಾಘನೀಯ. ಇದೇ ರೀತಿಯಲ್ಲಿ ಈ ಸಾಲಿನ ವಿದ್ಯಾರ್ಥಿ ಸಂಸತ್ತಿನ ಸಚಿವರು ತಮ್ಮ ಜವಾಬ್ದಾರಿ ಅರಿತು ತಮ್ಮ ಪರಿಮಿತಿಯಲ್ಲಿ ಶಾಲಾಭಿವೃದ್ಧಿ ಬಗ್ಗೆ ಗಮನ ಹರಿಸಬೇಕು. ಶಿಕ್ಷಕ ವರ್ಗ ಹಾಗೂ ಸಹಪಾಠಿಗಳೊಂದಿಗೆ ಬಾಂಧ್ಯವ್ಯವಿರಿಸಿ ಸಹಬಾಳ್ವೆ ಮೂಲಕ ಶಾಲೆಯ ಶಿಸ್ತು, ಸಂಯಮವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಸಂಸತ್ತಿನ ಸಭಾಪತಿ ಆಯೇಶಾ ತುಲ್‌ಅದಾ ಮಂತ್ರಿ ಮಂಡಲದ 15 ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಪ್ರಾಸ್ತವಿಸಿದರು. ಶಿಕ್ಷಣ ಸಂಯೋಜಕ ಸುಬ್ರಹ್ಮಣ್ಯ ಜೋಶಿ, ವಿದ್ಯಾರ್ಥಿ ನಾಯಕ ಅಬ್ದುಲ್ ರಾಝಿಕ್, ವಿದ್ಯಾರ್ಥಿ ನಾಯಕಿ ರಾಶಿ ಸುವರ್ಣ ಕ್ರೀಡಾ ಮಂತ್ರಿ ಸ್ಕಂದರಾಜ್ ಹೋಬಳೀದಾರ್, ಸಾಂಸ್ಕೃತಿಕ ಸಚಿವೆ ಆಯೇಶಾ ಮುಸ್ಕಾನಾ, ಶಿಸ್ತು ಮಂತ್ರಿ ಮಹಮ್ಮದ್ ತವಾಬ್, ತರಗತಿ ಪ್ರತಿನಿಧಿ ಯಾಸಿರ್ ಮಲಿಕ್ ಹಾಗೂ ವಿವಿಧ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಭಾರ್ಗವಿ ಸ್ವಾಗತಿಸಿ, ಅನಿತಾ ನಿರೂಪಿಸಿದರು. ನಿರ್ಮಲಾ ವಂದಿಸಿದರು.