ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಭಾಷೆಗಿರುವ ಇತಿಹಾಸ ಕುಂದಗನ್ನಡ ಭಾಷೆಗೂ ಇದೆ. ಪ್ರಾದೇಶಿಕ ಅನನ್ಯತೆಯನ್ನು ಒಳಗೊಂಡು ವಿಶಿಷ್ಠ ನಂಬಿಕೆ ಆಚರಣೆಗಳ ಮೂಲಕ ಸಾಂಸ್ಕೃತಿಕ ಹೆಗ್ಗುರುತನ್ನು ಹೊಂದಿರುವ ಈ ಭಾಷೆಯ ಅಭಿವೃದ್ಧಿಗೆ ಮಂಗಳೂರು ವಿ.ವಿ.ಯಲ್ಲಿ ಕುಂದಗನ್ನಡ ಅಧ್ಯಯನ ಪೀಠಕ್ಕೆ ಅನುಮೋದನೆ ದೊರಕಿರುವುದು ಸ್ತುತ್ಯಾರ್ಹ. ಕುಂದಗನ್ನಡ ಭಾಷೆ & ಸಂಸ್ಕೃತಿಯ ಬಹುಮುಖಿ ಆಯಾಮದ ಸಂಶೋಧನೆಗೆ & ಅಭಿವೃದ್ಧಿಗೆ ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆಯಾಗಲಿ ಎಂದು ಕುಂದಪ್ರಭ ವಾರಪತ್ರಿಕೆ ಸಂಪಾದಕ ಯು. ಎಸ್. ಶೆಣೈ ಹೇಳಿದರು.
ಅವರು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಕನ್ನಡ ವಿಭಾಗ ಆಯೋಜಿಸಿದ ವಿಶ್ವ ಕುಂದಾಪ್ರಕನ್ನಡ ದಿನವನ್ನು ಉದ್ಧೇಶಿಸಿ ಮಾತನಾಡಿದರು. ಕುಂದಗನ್ನಡ ಭಾಷೆಯನ್ನು ಬಳಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೆಶ್ ಶೆಟ್ಟಿ ಹೇಳಿದರು.
ಮೂಡುಬಗೆಯ ಬಾಪು ಸಾಹೇಬರು ಭತ್ತ ಕುಟ್ಟುವ ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ರಾಮ್ ಶೆಟ್ಟಿ ಅತ್ತಿಕಾರ್, ಶ್ರೀ ಪ್ರಸಾದ್ ಜೋಗಿ ಹಕ್ಲಾಡಿ ಹಾಗೂ ಶ್ರೀ ಬಾಪು ಸಾಹೇಬ್ ಮೂಡುಬಗೆ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಆಶಯದ ನುಡಿಗಳನ್ನಾಡಿದರು. ವಿಭಾಗದ ಉಪನ್ಯಾಸಕರಾದ ಸುಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರವೀಣಾ ಮಹಾಬಲ ಪೂಜಾರಿ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು.