ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಆ.9: ಮನುಷ್ಯನಿಂದ ಹಿಡಿದು ಕ್ರಿಮಿ ಕೀಟ, ಪ್ರಾಣಿ ಪಕ್ಷಿ ಗಿಡ ಮರ ಎಲ್ಲದಕ್ಕೂ ಕೂಡ ಒಂದಕ್ಕೊಂದು ಸಂಬಂಧವಿದೆ. ಒಂದು ಕೊಂಡಿ ತಪ್ಪಿದರೂ ಭೂಮಿಯಲ್ಲಿ ಅತಿವೃಷ್ಟಿ ಅನಾವೃಷ್ಟಿ, ಭೂಕಂಪನದಂತಹ ಅನಾಹುತಗಳು ಸಂಭವಿಸುತ್ತದೆ. ಜೈವಿಕ ಪರಿಸರ ಕೊಂಡಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಒಂದು ಮರ ಕಡಿದರೆ ಹತ್ತು ಮರಗಳನ್ನು ನೆಡುವ ಇಚ್ಚಾಶಕ್ತಿ ನಮ್ಮಲ್ಲಿರಬೇಕು ಎಂದು ಉಡುಪಿ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಹೇಳಿದರು.
ಅವರು ನಾವುಂದದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಹೇರೂರು ಶಾಖೆಯಲ್ಲಿ ಹಮ್ಮಿಕೊಂಡ ಅರಣ್ಯ ಇಲಾಖಾ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡಾ 42 ರಷ್ಟು ಇರುವ ಅರಣ್ಯ ಪ್ರದೇಶ ಪ್ರಸ್ತುತ 22 ಶೇಕಡಾ ಇಳಿದಿದೆ. ಸರಕಾರ ಅರಣ್ಯ ವೃದ್ದಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೋಬೋ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಬ್ದಾರಿ. ಹಿರಿಯರು ಪರಿಸರದ ಜೊತೆ ಅನ್ಯೋನ್ಯತೆ ಹೊಂದಿದ್ದ ಕಾರಣ ಪರಿಸರ ಸಮತೋಲನ ಕಾಯ್ದುಕೊಂಡಿದ್ದರು. ಹಾಗಾಗಿ ಹವಾಮಾನ ವೈಪರೀತ್ಯ ನಿಯಂತ್ರಣದಲ್ಲಿತ್ತು. ಅಭಿವೃದ್ದಿ ಅನಿವಾರ್ಯ ಆದರೆ ಅಭಿವೃದ್ದಿಯ ಜೊತೆಗೆ ಪರಿಸರದ ಬಗ್ಗೆ ಕಾಳಜಿ ವಹಿಸದಿರುವುದೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.
ಹೇರೂರು ಗ್ರಾ.ಪಂ ಅಧ್ಯಕ್ಷ ಸುರೇಶ್ ನಾಯ್ಕ, ಬೈಂದೂರು ವಲಯ ಅರಣ್ಯಾಧಿಕಾರಿ ಸಿದ್ದೇಶ್ ಮುಖ್ಯ ಅತಿಥಿಗಳಾಗಿದ್ದರು.
ಸಂಘದ ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ. ಪೂಜಾರಿ, ಎಂ. ವಿನಾಯ ರಾವ್, ನರಸಿಂಹ ದೇವಾಡಿಗ, ರಾಮಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಶಿವರಾಮ ಪೂಜಾರಿ ಯಡ್ತರೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಳ್ವೆಗದ್ದೆ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಎಮ್. ಚಂದ್ರಶೀಲ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಹೆರೂರು ಶಾಖೆ ವಠಾರದಲ್ಲಿ ಗಿಡ ನೆಡಲಾಯಿತು. ಕಾರ್ಯಕ್ರಮದ ಭಾಗವಹಿಸಿದ ಸ್ವ-ಸಹಾಯ ಸಂಘದ ಸದಸ್ಯರಿಗೆ ಗಿಡಗಳನ್ನು ವಿತರಿಸಲಾಯಿತು.