ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ದೇಶ ಬಿಟ್ಟು ಗಾಂಧಿಯಿಲ್ಲ, ಗಾಂಧಿ ಬಿಟ್ಟು ಭಾರತವಿಲ್ಲ ಎಂಬುದನ್ನು ಎಲ್ಲರು ಅರಿತುಕೊಳ್ಳುವ ಅಗತ್ಯವಿದೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ ಕೃಷ್ಣ ಹೇಳಿದರು .
ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಕನ್ನಡ ವಿಭಾಗ ಮತ್ತು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತಾಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆದ ’ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳು ’ ಎರಡು ದಿನಗಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಂತಿಯುತವಾಗಿ ಸ್ವಾತಂತ್ರ್ಯವನ್ನು ತಂದುಕೊಟ್ಟು, ನೈತಿಕತೆಯ ಉತ್ತುಂಗದಲ್ಲಿ ಬದುಕಿ ಬಾಳಿದ ಕೀರ್ತಿ ಗಾಂಧಿಯವರಿಗೆ ಸಲ್ಲುತ್ತದೆ ಎಂದರು. ಗಾಂಧೀಜಿ ಅವರ ಬಗ್ಗೆ ಅಧಿಕೃತ ಸಾಹಿತ್ಯ ಓದಿ ಅರ್ಥೈಸಿಕೊಳ್ಳಿ. ನಂತರ ಪ್ರಶ್ನಿಸಿ. ಆದರೆ ಗೊತ್ತಿಲ್ಲದೇ ಟೀಕಿಸಬೇಡಿ ಎಂದರು. ಅಹಿಂಸಾತ್ಮಕ ಮತ್ತು ಸಾಮುದಾಯಿಕ ಸಮಾಜದ ಪರಿಕಲ್ಪನೆಯ ಆಲೋಚನೆಯನ್ನು ಮೈಗೂಡಿಸಿ ಬದುಕಿದರೆ ಗಾಂಧಿಗೆ ಸಲ್ಲಿಸುವ ಗೌರವವಾಗುತ್ತದೆ ಎಂದು ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಮಾತನಾಡಿ , ಗಾಂಧೀಜಿ ಕುರಿತ ಅಪಾರ ಗೌರವ , ಚಿಂತನ ಮಂಥನ ಮತ್ತು ವಿಚಾರಧಾರೆಗಳು ಇನ್ನಷ್ಟು ಹೆಚ್ಚಾಗಬೇಕು. ಜಗತ್ತಿನ ಯಾವುದೇ ದೇಶದಲ್ಲೂ ಇಂತಹ ಮಹಾತ್ಮರು ಸಿಗಲು ಸಾಧ್ಯವಿಲ್ಲ. ಆದ್ದರಿಂದ, ಗಾಂಧೀಜಿಯ ಕುರಿತ ಅಧ್ಯಯನ, ವಿಚಾರ, ವಿಶ್ಲೇ?ಣೆಗಳು ಮುಂದಿನ ಪೀಳಿಗೆಗೆ ತಲುಪುವಂತಾಗಬೇಕು ಎಂದು ಹೇಳಿದರು.
ಕವಯಿತ್ರಿ ಸವಿತಾ ನಾಗಭೂಷಣ ಮಾತನಾಡಿ, ಗಾಂಧಿ ವಿರೂಪಗೊಳಿಸುವ ಮನಸ್ಥಿತಿಗಳನ್ನು ದೂರ ಮಾಡುವುದೇ ನಾವು ಭೂಮಿಗೆ ನೀಡುವ ದೊಡ್ಡ ಗೌರವ ಎಂದರು. ಮಾತು ಮತ್ತು ಕೃತಿಗೆ ಸಂಬಂಧ ಇದ್ದರೆ ಮಾತ್ರ ನಡವಳಿಕೆ ಮೇಲೆ ನಂಬಿಕೆ ಬರುತ್ತದೆ. ಆದರೆ, ನಮ್ಮ ನಡುವೆ ಗಾಂಧಿ ಮಸುಕಾಗುತ್ತಿದ್ದಾರೆ. ಭೂಮಿ ಅಗತ್ಯ ಪೂರೈಸಬಹುದೇ ಹೊರತು ಆಸೆಗಳನ್ನಲ್ಲ ಎಂದು ಗಾಂಧಿ ಹೇಳಿದ್ದರು ಎಂದರು.
ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವ ಶ್ರೇಷ್ಟ. ತಪ್ಪನ್ನು ತಪು, ಸರಿಯನ್ನು ಸರಿ ಎಂದು ಒಪ್ಪಿಕೊಳ್ಳುವ ಮನೋಭಾವ ಗಾಂಧೀಜಿಯಲ್ಲಿತ್ತು ಎಂದು ಅಧ್ಯಾಪಕ, ಲೇಖಕ ಅರವಿಂದ ಚೊಕ್ಕಾಡಿ ನುಡಿದರು.
ಅನನ್ಯತೆ ಹಾಗೂ ಸ್ವಂತಿಕೆಯನ್ನು ಅಳವಡಿಸಿಕೊಂಡು ಅಂತರ್ವಾಣಿಯ ಮಾತಿನಂತೆ ನಡೆದವರು ಗಾಂಧಿ. ಗಾಂಧೀಜಿಯವರು ನಮ್ಮ ಹಾಗೇ ಇದ್ದ ವ್ಯಕ್ತಿ. ಆದರೆ ಜೀವನದ ಪ್ರತಿ ಘಟ್ಟದಲ್ಲಿ ತನ್ನನ್ನು ಸತ್ಯದ ಜೊತೆ ಪ್ರಯೋಗ ಮಾಡುತ್ತಾ ಮಹಾತ್ಮರೆನಿಸಿಕೊಂಡರು. ಅವರು ಪ್ರತಿ ಸನ್ನವೇಶವನ್ನು ಹೇಗೆ ತನ್ನ ಅಭ್ಯುದಯಕ್ಕೆ ಬಳಸಿಕೊಳ್ಳಬಹುದು ಎಂಬುದನ್ನು ಅರಿತಿದ್ದರು ಎಂದರು.
ಸ್ವರಾಜ್: ಹಾಗೆಂದರೇನು? ಡಾ. ಸಮನಸ್ ಕೌಲಗಿ
ಆಕ್ಸ್‌ಫರ್ಡ್‌ನ ಇಂದಿರಾಗಾಂಧಿ ಸ್ಕಾಲರ್, ಯೂನಿವರ್ಸಿಟಿ ಆಫ್ ಆಕ್ಸ್‌ಫರ್ಡ್‌ನ ಡಾ. ಸುಮನಸ್ ಕೌಲಗಿ ಮಾತನಾಡಿ ಒಳ್ಳೆಯ ಜೀವನದ ಕಲ್ಪನೆಯೆ ಸ್ವರಾಜ್ಯ. ನೈತಿಕತೆ, ರಾಜಕೀಯ, ಮನು? ಸಂಬಂಧ, ಆರ್ಥಿಕತೆ ಇವುಗಳ ಅರಿವು ಕೂಡ ಸ್ವರಾಜ್ಯದ ಕಲ್ಪನೆ ಎಂದರು. ಮುಂದುವರಿದ ದೇಶ ಎನ್ನಲು ಮುಖ್ಯ ಕಾರಣ ಆ ದೇಶದ ಜನರ ನೆಮ್ಮದಿ. ಮನು?ರಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕೊರತೆ ಬಾರದಂತೆ ಕಾಪಾಡಿಕೊಳ್ಳುಕೊಳ್ಳಲು ಸ್ವರಾಜ್ಯ ಒಂದು ಮೂಲ ಎಂದರು.
ಅಟೆನ್ ಬರೋರವರ ಗಾಂಧಿ ಸಿನೆಮಾ : ಡಾ ವಿಷ್ಣು ಮೂರ್ತಿ ಪ್ರಭು.
ಮಹಾತ್ಮಗಾಂಧಿಯವರುಇಡೊಈ ಜಗತ್ತನ್ನು ಪ್ರಭಾವಿಸಿದ ಏಕೈಕ ಮಹಾ ನಾಯಕ. ಇವರು ಮಹಾನ್ ನಾಯಕನಿಂದ ಮಹಾತ್ಮ ಪಟ್ಟವನ್ನು ಅಲಂಕರಿಸಿದ ಬಗೆಯನ್ನು ಅಟೆನ್ ಬರೋ ತನ್ನ ಗಾಂಧಿ ಸಿನೆಮಾದಲ್ಲಿ ಸೆರೆ ಹಿಡಿದವೊರಿ ಅನನ್ಯ.
ಎಲ್ಲಿಯೂ ಗಾಂಧಿಯ ಪಾತ್ರವನ್ನು ವೈಭವೀಕರಿಸದಂತೆ, ಗಾಂಧಿಯು ಅನುಸರಿಸಿದ ತತ್ವಗಳಿಗೆ ಸಣ್ಣ ಭಂಗವೂ ಆಗದಂತೆ ಇವರು ಸಿನೆಮಾ ಮಾಡಿದ ಪರಿ ಅದ್ಭುತವೇ ಹೌದು.
ಗಾಂಧಿಯವರಿಗೆ ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಆದ ಅವಮಾನವು ಭಾರತಕ್ಕೆ ಹೇಗೆ ಲಾಭವಾಯಿತು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಈ ಸಿನೆಮಾವನ್ನು 1962ರಲ್ಲಿ ಆರಂಭಿಸಿ 1982ರಲ್ಲಿ ಮುಗಿಸಿದರು. ಇದಕ್ಕೂ ಮುಂಚೆ ಬಿಬಿಸಿ, ಗಾಂಧಿಯ ಕುರಿತಂತೆ ಅವರ ಒಡನಾಡಿಗಳನ್ನು ಕೂರಿಸಿ ಮಾಡಿದ ಡಾಕ್ಯುಮೆಂಟರಿ ಬಿಟ್ಟರೆ ಬೇರೆ ಯಾರಿಂದಲೂ ಸಿನೆಮಾ ಮಾಡಲಾಗಿರಲಿಲ್ಲ. ಹಾಗಾಗಿ ಅಟೆನ್‌ಬರೋರವರ ಸಾಧನೆ ಅತ್ಯದ್ಭುತವೇ ಸರಿ. ಬಹುಶಃ ಗಾಂಧಿಯವರನ್ನ ಕೇಳಿದ್ದರೆ ಇಂತಹ ಸಿನೆಮಾ ಮಾಡಲು ಒಪ್ಪುತ್ತಿರಲಿಲ್ಲ. ಸಿನೆಮಾದಲ್ಲಿ ಗಾಂಧಿಯವರ ಅಂತಿಮ ಯಾತ್ರೆಯಲ್ಲಿ ಎರಡು ಲಕ್ಷ ಜನ ಸೇರಿಸಿದ್ದು, ಅವರಿಗೆ 1948ರ ವೇಷಭೂಷಣ, ಕೇಶವಿನ್ಯಾಸ, ನಡೆ ನಿಲುವುಗಳನ್ನು ಒದಗಿಸುವುದು ಸುಲಭವಲ್ಲ. ಸಿನೆಮಾದಲ್ಲಿ ಉಪ್ಪಿನ ಸತ್ಯಾಗ್ರಹ, ಗಾಂಧಿಯ ವಿವಾಹದಂತಹ ಕೆಲವು ಸನ್ನಿವೇಶಗಳಲ್ಲಿ ಕೊಂಚ ಕೃತಕತೆ ಇಣುಕಿದರೂ ಒಟ್ಟಂದಲಿ ಸಿನೆಮಾ ಅದ್ಬುತ ಪ್ರಯತ್ನವೇ ಸರಿ ಎಂದರು.
ಅಜ್ಜರಕಾಡು ಉಡುಪಿ ಸ.ಪ್ರ.ದ. ಕಾಲೇಜಿನ ಇತಿಹಾಸ ವಿಭಾಗದ ಸಹ-ಪ್ರಾಧ್ಯಾಪಕ ಡಾ. ರಾಮದಾಸ ಪ್ರಭು ’ದೇಶ ವಿಭಜನೆ’ಯಲ್ಲಿ ಮಹಾತ್ಮರ ಪಾತ್ರ ಇದೆಯೇ ಎನ್ನುವ ವಿಷಯದ ಕುರಿತು ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮತ್ತಿತರರು ಇದ್ದರು. ಮುಖ್ಯ ಅತಿಥಿಗಳಿಗೆ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿ, ಕನ್ನಡ ವಿಭಾಗ ಪ್ರಾಧ್ಯಾಪಕರಾದ ಡಾ. ಕೃಷ್ಣರಾಜ್ ಕರಬ, ಹರೀಶ್ ಟಿ.ಜಿ, ವಿದ್ಯಾರ್ಥಿನಿ ಮಾಧವಿ ಎನ್‌ಎಸ್ ಕಾರ್ಯಕ್ರಮ ನಿರೂಪಿಸಿದರು.