ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ಪುರಸಭಾ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಕುಂದಾಪುರ ಒಳಚರಂಡಿಯ ಅವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿ ನಿರ್ಲಕ್ಷ್ಯ, ಬೀದಿ ನಾಯಿ ಕಾಟ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ಹಾಗೂ ಪುರಸಭೆ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆ ಪ್ರಮುಖ ಚರ್ಚೆಯಾದವು.
ಪುರಸಭೆಯ ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ ಸಮಗ್ರ ಒಳಚರಂಡಿ ಯೋಜನೆ, ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಅಗೆಯಲಾದ ರಸ್ತೆಗಳು ಪ್ರಸ್ತುತ ಯಾವ ಸ್ಥಿತಿಗೆ ತಲುಪಿವೆ ಎಂಬುದನ್ನು ಖಾತ್ರಿ ಪಡಿಸಲು ಪುರಸಭೆ ಅಧಿಕಾರಿಗಳು ಕಛೇರಿ ಬಿಟ್ಟು ಒಮ್ಮೆ ನಗರ ಸುತ್ತಾಡಿ ಬನ್ನಿ. ಜನರು ಅನುಭವಿಸುತ್ತಿರುವ ಗೋಳು ಏನೆಂದು ಆಗ ಅರ್ಥವಾಗುತ್ತದೆ. ಪ್ರತಿಯೊಂದು ರಸ್ತೆಗಳು ಹದಗೆಟ್ಟಿವೆ. ವಿಪರೀತ ಮಳೆಯ ಕಾರಣಕ್ಕೆ ಹದಗೆಟ್ಟಿವೆ ಎಂಬುದರಲ್ಲಿ ಅರ್ಥವಿಲ್ಲ. ಮಳೆಗೆ ಮೊದಲೆ ಕೆಟ್ಟು ಹೋಗಿತ್ತು. ಈಗ ಮತ್ತಷ್ಟು ಹದಗೆಟ್ಟು ಹೋಗಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ವೀಣಾ ಬಿ. ಮೆಂಡನ್ ಪ್ರತಿಕ್ರಿಯಿಸಿ ಈಗಾಗಲೇ ವಾರ್ಡ್ ಸದಸ್ಯರ ಕೋರಿಗೆ ಮೇರೆಗೆ ಕೆಲವು ಕಡೆಗಳಲ್ಲಿ ತರ್ತು ದುರಸ್ತಿ ಕಾರ್ಯ ಸಡೆಸಲಾಗಿದೆ. ಗಮನಕ್ಕೆ ತಂದಲ್ಲಿ ತುರ್ತು ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ, ಉಡುಪಿ ಜಿಲ್ಲೆಯ ರಜತ ಮಹೋತ್ಸವ ಸಂದರ್ಭ ಕುಂದಾಪುರ ಪುರಸಭೆ ಸುವರ್ಣ ಮಹೋತ್ಸವ ಸಡಗರದಲ್ಲಿದೆ. ಆದರೆ ಪುರಸಭೆ ಆಡಳಿತ ಸುವರ್ಣ ಮಹೋತ್ಸವ ಆಚರಣೆ ಕುರಿತಂತೆ ಈವರೆಗೆ ಯಾವುದೇ ಚಿಂತನೆ ನಡೆಸದಿರುವುದ ಖೇದಕರ ಎಂದು ನುಡಿದರು. ಸದಸ್ಯ ಶ್ರೀಧರ ಶೇರಿಗಾರ್ ಧ್ವನಿಗೂಡಿಸಿದರು. ಸದಸ್ಯ ಸಂತೋಷ್ ಶೆಟ್ಟಿ ಮಾತನಾಡಿ, ಈ ಕುರಿತು ವಿಶೇಷ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ, ಮಾತನಾಡಿ ಅದ್ದೂರಿ ಕಾರ್ಯಕ್ರಮದ ಬದಲಿಗೆ ಕುಂದಾಪುರ ನಗರವನ್ನು ಇನ್ನಷ್ಟು ಸುಂದರಗೊಳಿಸಲು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಪುರಸಭೆಯ ಸುವರ್ಣ ಮಹೋತ್ಸವ ಆಚರಿಸಿದರೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ಬರಲಿದೆ. ನಗರದಲ್ಲಿ ಆಗಬೇಕಿರುವ ತುರ್ತು ಕಾರ್ಯಗಳ ನೀಲನಕ್ಷೆ ಸಿದ್ಧಪಡಿಸಿ ಶಾಸಕರ ಮೂಲಕ ರಾಜ್ಯ ಸರಕಾರಕ್ಕೆ ಅನುದಾನದ ಬೇಡಿಕೆ ಇರಿಸುವುದು ಸೂಕ್ತವಾಗಿದೆ ಎಂದರು.
ಸದಸ್ಯ ಅಬ್ಬು ಮಹಮ್ಮದ್ ಮಾತನಾಡಿ ವೆಸ್ಟ್ ಬ್ಲಾಕ್ ರಸ್ತೆಯ ನಿವಾಸಿಗಳು ಕೊಳಚೆ ನೀರಿನ ದಂಗುಡಿಗೆ ನಲುಗಿಹೋಗಿದ್ದಾರೆ. ಕೊಳಚೆ ನೀರು ಹರಿಯುವ ಪೈಪ್ ಲೈನ್ ಒಡೆದುಹೋಗಿ ಮನೆ ಪಕ್ಕದ ತೆರೆದ ಚರಂಡಿಯಲ್ಲಿ ಹರಿಯುತ್ತಿದೆ. ಕಳೆದ ಒಂದೂವರೆ ತಿಂಗಳುಗಳಿಂದ ಜನರು ತೊಂದರೆ ಎದುರಿಸುತ್ತಿದ್ದಾರೆ. ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು.
ಹೆಚ್ಚುತ್ತಿರುವ ಬೀದಿನಾಯಿಗಳ ಕಾಟ, ರೇಬಿಸ್ ಕಾಯಿಲೆ, ಬೀದಿಗಳ ನಿಯಂತ್ರಣ ಕುರಿತಂತೆ ಪಶು ವೈದ್ಯಾಧಿಕಾರಿ ಡಾ. ಬಾಬಣ್ಣ ಪೂಜಾರಿ ಅವರು ಸಭೆಯಲ್ಲಿ ಮಾಹಿತಿ ನೀಡಿದರು. ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೈಗೆತ್ತಿಕೊಳ್ಳು ಸಭೆ ತೀರ್ಮಾನಿಸಿತು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.