ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖ್ಯಾತ ಉದ್ಯಮಿ, ಸಂಘಟಕ, ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ (70 ವ) ತೀವ್ರ ಹೃದಯಾಘಾತದಿಂದ ಪುಣೆಯಲ್ಲಿ ಅಸುನೀಗಿದ್ದಾರೆ. ಕಳೆದ 2 ದಿನಗಳ ಹಿಂದೆ ಹೃದಯ ಸಂಬಂಧಿ ನೋವು ಕಾಣಿಸಿಕೊಂಡಿದ್ದು, ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹಿಮಾಲಯ ಬೆವರಿಚನ್ ಗೋವಾದ ಆಡಳಿತ ನಿರ್ದೇಶಕರಾಗಿದ್ದ ಅವರು ಬಿ.ಕೆ ಬಿನ್ಜಿಲ್ ಹಾಗೂ ಅಕ್ಷಯ್ ಆರ್ಗ್ಯಾನಿಕ್ ಪ್ರೈ. ಲಿ ಸಂಸ್ಥೆಯನ್ನು ಆರಂಭಿಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದರು. ಪುಣೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಅಲ್ಲಿಯೇ ನೆಲೆಸಿದ್ದರು.
ಪುಣೆ ಬಂಟರ ಸಂಘದ ಅಧ್ಯಕ್ಷರಾಗಿ, ಪುಣೆಯ ಬೋಟ್ ಕ್ಲಬ್ಬಿನ ಅಧ್ಯಕ್ಷರಾಗಿ, ಪುಣೆ ನಗರದ ಕಾಂಗ್ರೆಸ್ ಕಾರ್ಯರ್ಕಾರಿ ಸಮಿತಿ ಸದಸ್ಯರಾಗಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಇತ್ತಿಚಿಗೆ ಮೊಳಹಳ್ಳಿಯಲ್ಲಿ ಹುಟ್ಟೂರ ಸನ್ಮಾನ ಜರುಗಿತ್ತು.
ಮೃತರು ಪತ್ನಿ ಶಶಿ, ಪುತ್ರರಾದ ಅಕ್ಷಯ, ಆದರ್ಶ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.










