ಕೋಟ: ಶೈಕ್ಷಣಿಕವಾಗಿ ವರ್ಷವು ಉತ್ತಮ ಫಲಿತಾಂಶವನ್ನು ನೀಡುತ್ತಿರುವ ಉಡುಪಿ ಜಿಲ್ಲೆಯನ್ನು ಹೊರ ಜಿಲ್ಲೆಯವರು ಬುದ್ಧಿವಂತ ಜಿಲ್ಲೆ ಎಂದು ಸಹಜವಾಗಿ ಕರೆಯುತ್ತಾರೆ. ಮುಂದುವರಿದ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಕರೆಯಿಸಿ ಕೊಳ್ಳುತ್ತಾ, ವಿವಿಧ ಅಭಿವೃದ್ಧಿ ಪರ ಯೋಜನೆಯಿಂದ ವಂಚಿತರಾಗುತ್ತಾ ನಾವು ಹಿಂದೆ ಬರುತ್ತಿರುವ ಬಗ್ಗೆ ಗಮನ ಹರಿಸಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾಸಹಶಿಕ್ಷಕರ ಸಂಘ ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಮಾವೇಶ ಪ್ರೇರಣ ಜ್ಞಾನದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಾ, ಶಿಕ್ಷಣ ಕ್ಷೇತ್ರದ ಸಮಸ್ಯೆ ಅಗಾಧವಾದದ್ದು, ಅದರಲ್ಲಿ ಶಿಕ್ಷಕರ ಮತ್ತು ಶಿಕ್ಷಣದ ಸಮಸ್ಯೆ ಪ್ರತ್ಯೇಕವಾಗಿ ಗಮನಿಸಿದರೆ ಸಾಕಷ್ಟು ಸಮಸ್ಯೆಗಳನ್ನು ಕಾಣಬಹುದು. ರಾಜ್ಯದ ೪೮ ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 10 ಸಾವಿರ ಶಾಲೆಯಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ನಿಟ್ಟಿನಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಸ್ಯೆಗಳ ಸಮಾಲೋಚನೆ ನಡೆಸಿ ಪರಿಹಾರ ಕಂಡು ಕೊಳ್ಳಬೇಕಾಗಿದೆ. ಇಂದು ನಮ್ಮನ್ನು ಕಾಡುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಮಾದಕ ದ್ರವ್ಯಗಳ ವ್ಯಸನ ಮತ್ತು ಭಯೋತ್ಪಾದನೆ. ವರ್ಷವು ಮಾದಕ ದ್ರವ್ಯ ವ್ಯವಸನ ನಿವಾರಣೆಗೆ ಒಂದುವರೆ ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ಅಪರಾಧ ಪ್ರಕರಣಗಳು ಕೂಡ ಹೆಚ್ಚುತ್ತಿದ್ದು, 68 ಶೇಕಡಾ ಅಪರಾಧಿಗಳು ನಮ್ಮ ಯುವಕರು ಎನ್ನುವುದು ಒಂದೆಡೆಯಾದರೆ ಅವರನ್ನು ೯೦ಶೇಕಡಾ ಜನ ವಿದ್ಯಾವಂತರು ಎನ್ನುವುದು ನೋವಿನ ವಿಚಾರವಾಗಿದೆ. ಶಿಕ್ಷಕರೇಲ್ಲರೂ ಮುಂದಿನ ದಿನಗಳಲ್ಲಿ ರಾಷ್ಟ್ರಪ್ರೇಮಿ ನಾಗರೀಕರನ್ನು ಸೃಷ್ಟಿಸಬೇಕಾದ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಶಿಕ್ಷಕರ ನಿರಂತರ ಶ್ರಮ ಮತ್ತು ಕಠಿಣ ಪರಿಶ್ರಮ ನಮ್ಮನ್ನು ಇಂದು ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ಸ್ಥಾನಕ್ಕೆ ತಂದಿದೆ. ನಮ್ಮ ಮುಂದಿನ ಗುರಿ 65 ಶೇಕಡಾ ಫಲಿತಾಂಶ ದಾಖಲಿಸುವುದಾಗಿದೆ. ಗುಣಮಟ್ಟದ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಿವೃತ್ತ ಶಿಕ್ಷಕ ವಿಠ್ಠಲ ವಿ.ಗಾಂವ್ಕರ್, ನಿವೃತ್ತ ಶಿಕ್ಷಕ ಚಂದ್ರ ಶೇಖರ ಅಡಿಗ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಅಶೋಕ ಕುಮಾರ್ ಶೆಟ್ಟಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳೇಗಾರ್ ಉಪಸ್ಥಿತರಿದ್ದರು. ಇದೇ ಸಂದರ್ಭ ಉಡುಪಿ ಜಿಲ್ಲಾ ಕಸಾಪ ಪ್ರಕಟಿಸಿದ ಪುಸ್ತಕಗಳನ್ನು ಉಚಿತವಾಗಿ ಪ್ರೌಢಶಾಲೆಗಳಿಗೆ ವಿತರಿಸಲಾಯಿತು.
ಶಿಕ್ಷಕ ಪ್ರೇಮಾನಂದ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಕಿರಣ ಹೆಗ್ಡೆ ಸ್ವಾಗತಿಸಿ ಪ್ರಸ್ತಾವಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಶಿಕ್ಷಕರು ಬಹು ಸಂಖ್ಯೆಯಲ್ಲಿ ಭಾಗವಹಿಸಿದರು.