ಕೋಟ: ಕಾರಂತರೊಂದಿಗೆ ಅವರ ಸಿನೆಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುವಾಗ ನಾನು ಗಮನಿಸಿ ಅಂಶ ಬಹಳಷ್ಟು. ಕಾರಂತರ ಸರಳತೆ ಸರ್ವರೂ ಆದರ್ಶ. ಅವರ ಸಮಯ ಪ್ರಜ್ಞೆಯ ಬಗ್ಗೆ ಎರಡು ಮಾತಿಲ್ಲ. ಅವರ ಅಗಾಧ ಜ್ಞಾನ ಸಂಪತ್ತಿನ ಮುಂದೆ ನಾವೇಲ್ಲರೂ ತೃಣಕ್ಕೆ ಸಮಾನ ಎಂದು ಸಾಂಸ್ಕೃತಿಕ ಚಿಂತಕ ಕಾರಂತರ ಒಡನಾಡಿ ಶೇಖರ ಆಚಾರ್ಯ ಹೇಳಿದರು.
ಅವರು ಸಂಜೆ ಕಾರಂತ ಹುಟ್ಟೂರ ಪ್ರಶಸ್ತಿ ಅಂಗವಾಗಿ ಕೋಟ ಕಾರಂತ ಥೀಂ ಪಾರ್ಕನಲ್ಲಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ(ರಿ.) ಸಾಲಿಗ್ರಾಮ, ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸೇವಾ ಸಂಘ(ರಿ.) ಕೋಟ ಅವರ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಚಲನಚಿತ್ರ ಉತ್ಸವ ಸ್ಮೃತಿ ನನಸುಗಳ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋಟತಟ್ಟು ಪಂಚಾಯಿತಿ ಸದಸ್ಯ ಜಯಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ, ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ, ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸದಾನಂದ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಇದೇ ಸಂದರ್ಭ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕಾರಂತರ ಕಾದಂಬರಿ ಆಧಾರಿತ ಚಲನಚಿತ್ರ ಪ್ರದರ್ಶನ ನಡೆಯಿತು.