ಕೊಲ್ಲೂರು: ಇಲ್ಲಿಗೆ ಸಮೀಪದ ಎಲ್ಲೂರು ಸಂತೆಗದ್ದೆ ಎಂಬಲ್ಲಿ ಶಿಲಾ ಶಾಸನ ಪತ್ತೆಯಾಗಿದೆ. ಅದನ್ನು ಪರಿ ಶೀಲಿಸಿದ ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತ ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ಅದು ವಿಜಯನಗರ ಸಾಮ್ರಾಜ್ಯದ ಸ್ಥಾಪಕರಲ್ಲಿ ಒಬ್ಬನಾದ ಮೊದಲನೇ ಬುಕ್ಕರಾಯನಿಗೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಶಾಸನವನ್ನು ಶಕವರ್ಷ 1275ನೆ ಶುಕ್ಲ ಸಂವತ್ಸರದಲ್ಲಿ ಕೆತ್ತಿದ್ದು, ಅದು ಕ್ರಿ.ಶ. 1353ಕ್ಕೆ ತಾಳೆಯಾಗುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯ 24 ಸಾಲುಗಳಲ್ಲಿರುವ ಶಾಸನವು ಬುಕ್ಕರಾಯನನ್ನು ‘ಮಹಾ ಮಂಡಳೇಶ್ವರ ಅರಿರಾಯ ವಿಭಾಡ ಭಾಷೆಗೆ ತಪ್ಪದ ರಾಯರ ಗಂಡ’ ಎಂಬ ಹೊಗಳಿಕೆಯೊಂದಿಗೆ ಶ್ರೀವೀರ ಬುಕ್ಕಂಣ ಒಡೆಯ ಎಂದು ಸಂಭೋದಿಸಿದೆ. ಬುಕ್ಕರಾಯನ ಆಳ್ವಿಕೆಯ ಕಾಲದಲ್ಲಿ ಮಲೆಯ ದಂಣಾಯಕ ಅವನ ಪ್ರಧಾನಿ ಯಾಗಿರುವ ಉಲ್ಲೇಖವಿದೆ. ಮಾರ ಮುಂಡಿನ ತಂಮ ಹೆಗಡೆ ಮತ್ತು ಎಡವ ಕೊಲ್ಲಿಯ ತಂಮ ಹೆಗಡೆ ಎಂಬ ಇಬ್ಬರು ಮಾಂಡಲೀಕರನ್ನು ಹೆಸರಿಸಲಾಗಿದೆ.
ಕೋಟೀಶ್ವರ ದೇವರ ಬದ್ದುರ ರುದ್ರ ಪೂಜೆಗೆ ನೀಡಿದ ದಾನದ ಕುರಿತಾ ಗಿರುವ ಇದು ಒಂದು ದಾನ ಶಾಸನ. ಬದ್ದುರ ಈಗಿನ ಬೈಂದೂರಿನ ಪ್ರಾಚೀನ ಹೆಸರಾಗಿರಬಹುದು. ರದ್ದನಾಡು ಮತ್ತು ಕಂದಿಕನಾಡು ಎಂಬ ಎರಡು ನಾಡುಗಳ ಹೆಸರಿದ್ದು, ಎಡವಕೊಲ್ಲಿ ಈಗಿನ ಕೊಲ್ಲೂ ರಾಗಿರಬಹುದಾದ್ದರಿಂದ ಇದು ಕೊಲ್ಲೂ ರಿನ ಕುರಿತಾಗಿರುವ ಅತ್ಯಂತ ಪ್ರಾಚೀನ ಉಲ್ಲೇಖವಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದರು.
ಶಾಸನದ ಕೊನೆಯಲ್ಲಿ ‘ಈ ಧರ್ಮ ವನ್ನು ಪಾಲಿಸಿದವರಿಗೆ ವಾರಣಾಸಿ ಕ್ಷೇತ್ರ ದಲ್ಲಿ ಸಹಸ್ರ ಕನ್ಯಾದಾನ ಮತ್ತು ಗೋದಾನ ನೀಡಿದ ಫಲ, ಅಳಿದವಗೆ ಗಂಗೆಯ ತಡಿಯಲ್ಲಿ ನೂರ ಒಂದು ಕಪಿಲೆಯ ಕೊಂದ ಪಾಪ’ ಎಂದಿದೆ. ಆ ಬಳಿಕ ಸಂಸ್ಕೃತದಲ್ಲಿ ಅರುವತ್ತು ಸಹಸ್ರ ಕ್ರಿಮಿಯಾಗಿ ಹುಟ್ಟುತ್ತಾರೆ ಎಂಬ ಶಾಪಾಶಯವಿದೆ.
ಈ ಶಾಸನ ಇರುವುದರ ಮಾಹಿತಿ ನೀಡಿದ ಜನ್ಮನೆ ಆನಂದ ಶೆಟ್ಟಿ, ಕೊಲ್ಲೂರು ದೇವಾಲಯದ ಸಹಾಯಕ ಎಂಜಿನಿಯರ್ ಮುರಳೀಧರ ಹೆಗಡೆ, ಎಲ್ಲೂರಿನ ಕೊಟ್ಟಾರಿ ಮನೆಯವರಿಗೆ ಮತ್ತು ಸಹಕರಿಸಿದ ತಮ್ಮ ವಿದ್ಯಾರ್ಥಿ ಗಳಾದ ಸಂಗೀತ ಮತ್ತು ಸುಮಾ ಅವರಿಗೆ ಪ್ರೊ.ಮುರುಗೇಶಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.