ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೋಟ ಶಿವರಾಮ ಕಾರಂತ ಜನ್ಮೋತ್ಸವ ಕಾರ್ಯಕ್ರಮ ಈ ಭಾರಿ ಕೋಟದ ರಾಷ್ಟ್ರೀಯ ಹೆದ್ದಾರಿ ಶ್ರೀ ಶಾಂಭವಿ ಶಾಲೆಯ ಮೈದಾನದಲ್ಲಿ ನಡೆಯಲಿದ್ದು, ಸಭಾ ವೇದಿಕೆ ನಿರ್ಮಾಣ ಸೇರಿದಂತೆ ಪೂರ್ವ ಸಿದ್ಧತೆಗಳ ಕುರಿತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವೀಕ್ಷಿಸಿದರು.
ಅಕ್ಟೋಬರ್ 10ರಂದು ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕಾರಂತರ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಬಾರಿ ಪ್ರಶಸ್ತಿಗೆ ಕಲಾವಿದ ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ. ಸುಮಾರು 2000 ಮಂದಿ ಕುಳಿತು ವೀಕ್ಷಿಸಬಹುದಾದ ವಿಶಾಲ ಸುಸಜ್ಜಿತ ಸಭಾ ವೇದಿಕೆ ಸಿದ್ಧತೆ ಮಾಡಲಾಗುತ್ತಿದ್ದು, ಕಾರ್ಯಕ್ರಮದ ನಂತರ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಅಪಾರ ಜನ ಸೇರುವ ನಿರೀಕ್ಷೆ ಇದೆ.
ಅಕ್ಟೋಬರ್ 10ರ ಮಧ್ಯಾಹ್ನ 3:30ಕ್ಕೆ ಕೋಟತಟ್ಟು ಗ್ರಾಮ ಪಂಚಾಯತ್ ನಿಂದ ಪ್ರಶಸ್ತಿ ಪುರಸ್ಕತರೊಂದಿಗೆ ಸಾಂಸ್ಕೃತಿಕ ಮೆರವಣಿಗೆ ಹೊರಡಲಿದ್ದು, ಕಾರಂತ ಪ್ರಶಸ್ತಿಯನ್ನು ಸಕಲ ಗೌರವಗಳೊಂದಿಗೆ ಹೊತ್ತು ಸಾಗುವ ಸಂಪ್ರದಾಯವಿದೆ. ಕಾರಂತೋತ್ಸವದ ಪೂರ್ವ ಸಿದ್ಧತೆಗಳನ್ನು ವೀಕ್ಷಿಸಲು ಬಂದ ಸಚಿವ ಕೋಟ ಅವರೊಂದಿಗೆ ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಮುಂತಾದವರು ಉಪಸ್ಥಿತರಿದ್ದರು