ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕರ ಹೋರಾಟದ ಬಳಿಕ ಅಂತಿಮವಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ನಗರಕ್ಕೆ ಪ್ರವೇಶ ದೊರೆತಿದೆ. ಬೊಬ್ಬರ್ಯನಕಟ್ಟೆ ಜಂಕ್ಷನ್ ಬಳಿ ಚತುಷ್ಪಥ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಕುಂದಾಪುರ ನಗರ ಪ್ರವೇಶಿಸಲು ಶನಿವಾರ ತಾಲೂಕು ಆಡಳಿತ ಅವಕಾಶ ನೀಡಿದೆ.
ಚತುಷ್ಪಥ ಕಾಮಗಾರಿಯ ಪ್ಲೈಓವರ್ ನಿರ್ಮಾಣ ಆರಂಭ ಆದಾಗಲಿಂದಲೂ ಕುಂದಾಪುರ ನಗರಕ್ಕೆ ಪ್ರವೇಶ ಪಡೆಯಲು ಹಂಗಳೂರಿನಿಂದಲೇ ಸರ್ವಿಸ್ ರೋಡಿಗೆ ತೆರಳಬೇಕಾಗಿತ್ತು. ನಾಗರಿಕರಿಗೂ ಇದರಿಂದ ಸಾಕಷ್ಟು ಅನಾನುಕೂಲ ಎದುರಾಗಿತ್ತು. ಅದಕ್ಕಾಗಿ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿಯೇ ಪ್ಲೈಓವರ್ ಚತುಷ್ಪಥ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಪ್ರವೇಶ ಕಲ್ಪಿಸಬೇಕೆಂದು ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಹಾಗೂ ಪುರಸಭೆ ಹೋರಾಟ ನಡೆಸಿಕೊಂಡು ಬಂದಿದ್ದವು.
ಪುರಸಭೆಯ ನಿಯೋಗ ಹಾಗೂ ಸಾರ್ವಜನಿಕರು ಕೇಂದ್ರ ಕೃಷಿಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದರು. ಬಳಿಕ ಸಚಿವರು ಉಡುಪಿ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದರು. ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಡಳಿತವು ಸ್ಥಳ ಪರಿಶೀಲನೆ ನಡೆಸಿ ಕುಂದಾಪುರ ನಗರ ಪ್ರವೇಶಕ್ಕೆ ಅನುಮತಿ ನೀಡುವಂತೆ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಿತ್ತು.
ಹೆದ್ದಾರಿ ಯೋಜನಾ ಪ್ರಾಧಿಕಾರದ ಪಿಡಿ ಲಿಂಗೇಗೌಡ ಮಾರ್ಚ್ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಫೈಓವರ್ ಹೆದ್ದಾರಿಯಿಂದ ಕುಂದಾಪುರ ನಗರ ಪ್ರವೇಶಿಸಲು ಸರ್ವಿಸ್ ರಸ್ತೆಗಿದ್ದ ಡಿವೈಡರ್ ತೆರವು ಗೊಳಿಸುವ ಭರವಸೆ ನೀಡಿದ್ದರು. ಅದರಂತೆ ಶನಿವಾರ ಡಿವೈಡರ್ ತೆರವುಗೊಳಿಸಿ ಫೈಓವರ್ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.
ಎರಡೂ ಬದಿಯಲ್ಲಿಯೂ ಡಿವೈಡರ್ ತೆರವುಗೊಳಿಸಿ:
ಫ್ಲೈಓವರಿನ ಒಂದು ಬದಿಯಲ್ಲಿ ಮಾತ್ರ ಡಿವೈಡರ್ ತೆರವುಗೊಳಿಸಿ ನಗರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೊಂದು ಬದಿಯಲ್ಲಿ ಈವರೆಗೆ ಡಿವೈಡರ್ ತೆರವುಗೊಳಿಸಿಲ್ಲ. ಎರಡೂ ಬದಿಯಲ್ಲಿಯೂ ಡಿವೈಡರ್ ತೆರವುಗೊಳಿಸಿ ಅಗತ್ಯವಿರುವಲ್ಲಿ ಬೀದಿದೀಪ ವ್ಯವಸ್ಥೆ ಮಾಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
► ಪುರಸಭಾ ವ್ಯಾಪ್ತಿಯಲ್ಲಿಯೇ ಕುಂದಾಪುರ ನಗರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್, ಯೋಜನಾ ನಿರ್ದೇಶಕರ ಭೇಟಿ – https://kundapraa.com/?p=58106 .
► ಕುಂದಾಪುರ ನಗರದಿಂದ ಫ್ಲೈ ಓವರ್‌ಗೆ ಪ್ರವೇಶ – ನಿರ್ಗಮನಕ್ಕೆ ಅವಕಾಶಕ್ಕೆ 30ರೊಳಗೆ ಕ್ರಮ – https://kundapraa.com/?p=53929 .
► ಪ್ಲೈಓವರ್ ಮೂಲಕ ನಗರಕ್ಕೆ ಪ್ರವೇಶ ಪ್ರಸ್ತಾಪವನ್ನು ಅಧಿಕಾರಿಗೆ ತಲುಪಿಸಲಾಗುವುದು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ – https://kundapraa.com/?p=51410 .