ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಕರಾವಳಿಯ ಮಣ್ಣಿನ ಕಥೆಯನ್ನು ಸಾರುವ ಕಾಂತಾರ ಸಿನಿಮಾವನ್ನು, ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ದೈವ ನರ್ತಕರು, ದರ್ಶನ ಪಾತ್ರಿಗಳು ಮತ್ತು ದೈವ ಸೇವೆ ಮಾಡುವವರ ಜೊತೆ ಬುಧವಾರ ಕುಂದಾಪುರದಲ್ಲಿ ವೀಕ್ಷಿಸಿದ್ದಾರೆ.
ಕೋಟೇಶ್ವರದ ಭಾರತ್ ಸಿನಿಮಾಸ್’ನ ಒಂದು ಸ್ಕ್ರೀನ್ ಮುಂಗಡವಾಗಿ ಬುಕ್ ಮಾಡಿದ್ದ ಸಚಿವರು, ಉಡುಪಿ ಜಿಲ್ಲೆಯ ದೈವ ನರ್ತಕರು, ದರ್ಶನ ಪಾತ್ರಿಗಳು ಮತ್ತು ಸೇವೆ ಮಾಡುವವರ ಬೆಳಿಗ್ಗೆ 11:30ರ ಶೋ ವೀಕ್ಷಿಸುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಕುಂದಾಪುರದವರಾದ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರ ಸದ್ಯ ಟಾಕ್ ಆಫ್ ನೇಷನ್ ಎಂಬಂತಾಗಿದೆ. ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ತೆರೆದಿಟ್ಟು, ಮನೋಜ್ಞವಾಗಿ ಅಭಿನಯಿಸಿದ ರಿಷಬ್ ಶೆಟ್ಟಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವುದಲ್ಲದೇ ಹಲವು ದಾಖಲೆಗಳನ್ನು ಸಾಧಿಸಿ ಮುನ್ನುಗ್ಗುತ್ತಿದೆ.
ಸಿನಿಮಾ ನೋಡುವುದಾಗಿ ನಿನ್ನೆಯೇ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 90ಕ್ಕೂ ಹೆಚ್ಚು ದೈವ ನರ್ತಕರು, ದರ್ಶನ ಪಾತ್ರಿಗಳು ಮತ್ತು ಸೇವೆ ಮಾಡುವವರ ಹಾಗೂ 20 ಮಂದಿ ಆತ್ಮೀಯರೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಬೈಂದೂರು ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ ಹಾಗೂ ಸಿನಿಮಾದ ಕೆಲವು ಕಲಾವಿದರು ಜೊತೆಗಿದ್ದರು.