ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆರೋಗ್ಯ ಸಂಬಂಧಿ ಲೇಖನಗಳನ್ನು ಬರೆಯುವ ಲೇಖಕರು ಎಚ್ಚರಿಕೆಯನ್ನು ವಹಿಸಬೇಕು. ಕಾಯಿಲೆಗಳ ಬಗ್ಗೆ ಬರೆಯುವಾಗ ಲೇಖನದ ಕೊನೆಯಲ್ಲಿ ರೋಗಿಗಳಿಗೆ ಭಯಹುಟ್ಟಿಸವಂತಹ ’ಭಯೋತ್ಪಾದಕ’ರಾಗದೆ, ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಧನಾತ್ಮಕ ಅಂಶಗಳಿಂದ ಲೇಖನವನ್ನು ಮುಕ್ತಾಯಗೊಳಿಸಿಬೇಕು ಎಂದು ಖ್ಯಾತ ಮನೋರೋಗ ತಜ್ಞರು ಹಾಗೂ ವೈದ್ಯ ಸಾಹಿತಿ ಡಾ. ಸಿ. ಆರ್. ಚಂದ್ರಶೇಖರ್ ಕರೆ ನೀಡಿದರು.
ಅವರು ಆಳ್ವಾಸ್ ಕಾಲೇಜಿನಲ್ಲಿ ನಡೆದ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ೮೮ನೇ ರಾಜ್ಯ ಸಮ್ಮೇಳನದ ಎರಡನೇ ದಿನದಂದು ನಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವೈದ್ಯಕೀಯ ಲೇಖನಗಳನ್ನು ಬರೆಯುವಾಗ ಕೇವಲ ಇಂಟರ್‌ನೆಟ್ ಮೂಲವನ್ನು ಮಾತ್ರ ಅವಲಂಬಿತವಾಗಿರದೆ, ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಜೊತೆಗೆ ತಮ್ಮ ಸ್ವಾನುಭವ ಅಥವಾ ತಜ್ಞರ ಹಾಗೂ ರೋಗಿಗಳ ಅನುಭವಗಳನ್ನು ಸಂಗ್ರಹಿಸಿ ಬರೆಯುವ ಮೂಲಕ ಉತ್ತಮ ಲೇಖನಗಳನ್ನು ರಚಿಸಬಹುದು ಎಂದರು.
ಬರಹಗಾರರು ಕಾಲಮಿತಿ, ಪುಟಗಳ ಮಿತಿ, ಪದಗಳ ಮಿತಿ ಹಾಗೂ ಓದುಗರ ಸಹನೆಯ ಮಿತಿಯನ್ನು ಗಮನದಲ್ಲಿರಿಸಿಕೊಂಡು- ಚಿಕ್ಕ ವಾಕ್ಯಗಳನ್ನು ಒಳಗೊಂಡ ಸಂಕ್ಷಿಪ್ತ ಬರಹವನ್ನು ಬರೆಯಬೇಕು. ಅನುಭವದಿಂದ ಹುಟ್ಟುವ ಸಾಹಿತ್ಯ ಅತ್ಯದ್ಭುತ ಸಾಹಿತ್ಯ ವಾಗಿರುತ್ತದೆ. ಲೇಖಕರು ಭಾಷೆಯ ಮೇಲೆ ಪಾಂಡಿತ್ಯ ಸಾಧಿಸಲು ಸಾಹಿತ್ಯ ಕೃತಿಗಳನ್ನು ಓದಬೇಕು, ಉತ್ತಮ ಭಾಷಣವನ್ನು ಕೇಳಬೇಕು ಜೊತೆಗೆ ಬರವಣೆಗೆಯನ್ನು ಅಭ್ಯಾಸ ಮಾಡಿದಾಗ ಉತ್ತಮ ಲೇಖನವನ್ನು ರಚಿಸಲು ಸಾಧ್ಯ ಎಂದು ಹೇಳಿದರು.
ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷ ಡಾ. ಅರವಿಂದ ಪಟೇಲ್, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ವೀಣಾ ಎಂ ಸುಳ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳಾದ ಸೌರಭ್, ಅಖಿಲಾ, ಪವಿತ್ರಾ, ಶಿವಾನಿ, ಅಯನಾ, ಅರ್ಪಿತಾ, ಹಾಗೂ ಅಧ್ಯಯನ ವೈದ್ಯಕೀಯ ಬರಹಗಳ ಲೇಖನಗಳನ್ನು ಪ್ರಸ್ತುತ ಪಡಿಸಿದರು. ಕಾರ‍್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಪವಿತ್ರಾ ನಿರೂಪಿಸಿ, ಅಖಿಲಾ ಸ್ವಾಗತಿಸಿ, ಅಯನಾ ಅತಿಥಿಯನ್ನು ಪರಿಚಯಿಸಿ, ಅನನ್ಯ ವಂದಿಸಿದರು.















