ಕೋಟ: ಅನುಕೂಲತೆಗಳು ಜಾಸ್ತಿಯಾದಂತೆ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಒಂದರ್ಥದಲ್ಲಿ ಜನ ಸಂಪತ್ಭರಿತರಾಗುತ್ತಿದ್ದಾರೆ ಎನ್ನಬಹುದು. ಕೃಷಿಯನ್ನು ನೆಚ್ಚಿಕೊಂಡು ಬದುಕು ಸಾಗಿಸಬೇಕಾದ ಅಗತ್ಯತೆ ಇಂದು ಇಲ್ಲವಾಗಿದೆ. ಕೃಷಿ ದೇಶವಾಗಿ ಗುರುತಿಸಿಕೊಂಡ ನಮ್ಮ ದೇಶ ಮುಂದೆ ಕೃಷಿ ದೇಶವಾಗಿ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ನಿರಾಸಕ್ತಿ ಕೃಷಿಗೆ ಮಾರಕವಾಗುತ್ತಿದೆ ಎಂದು ಸಾಂಸ್ಕೃತಿಕ ಚಿಂತಕ, ಕೃಷಿಕ ಶಿವಾನಂದ ಹಂದೆ ಹೇಳಿದರು.
ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ ೭ ದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಕೋಟತಟ್ಟು ಒಕ್ಕೂಟ, ರೋಟರಿ ಕ್ಲಬ್ ಕೋಟ ಸಿಟಿ, ಅಘೋರೇಶ್ವರ ಫ್ರೆಂಡ್ಸ್ ಕಾರ್ತಟ್ಟು ಚಿತ್ರಪಾಡಿ ಇವರ ಆಶ್ರಯದಲ್ಲಿ ಆಯೋಜಿಸಲಾದ ಪ್ರಗತಿ ಪರ ರೈತರ ಸಮಾವೇಶ ಒತ್ತಾಸೆ ಅನುಭವದ ಭಾವಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮವನ್ನು ನಾಟಿ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.
ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ರೋ ಗಣೇಶ್ ಯು., ಭತ್ತದ ಕೃಷಿಕರಾದ ಭಾಸ್ಕರ ಶೆಟ್ಟಿ, ರವೀಂದ್ರ ಐತಾಳ, ನೆಲಗಡಲೆ ಕೃಷಿಕ ಶಿವಮೂರ್ತಿ ಉಪಾಧ್ಯಾಯ, ತರಕಾರಿ ಕೃಷಿಕರಾದ ತಿಮ್ಮ ಪೂಜಾರಿ, ರವೀಂದ್ರ ಶೆಟ್ಟಿ, ಹೈನು ಕೃಷಿಕರಾದ ಜಾನಕಿ ಹಂದೆ ಮತ್ತು ಶಾರದ ರಾಮಚಂದ್ರ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ಶಿವಾನಂದ ಅಡಿಗ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯಕ್ರಮ ಆಯೋಜನೆ ಸಹಕರಿಸಿದ ಗಣ್ಯರನ್ನು ಪ್ರತಿಷ್ಠಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಕೋಟತಟ್ಟು ಪಂಚಾಯಿತಿ ಸದಸ್ಯ ವಾಸು ಪೂಜಾರಿ ವಂದಿಸಿದರು. ಇದೇ ಕಾರ್ಯಕ್ರಮದಲ್ಲಿ ಭತ್ತದ ಕೃಷಿ, ನೆಲಗಡಲೆ, ತರಕಾರಿ ಮತ್ತು ಹೈನುಗಾರಿಕೆ ವಿಚಾರವಾಗಿ ಮಾತುಕತೆ ನಡೆಯಿತು.