ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಾನ್ ಹಾಫ್‌ಕಿನ್ಸ್, ಯುನಿಸೆಫ್, ಬೈರೂಟ್‌ನ ಅಮೇರಿಕನ್ ವಿಶ್ವವಿದ್ಯಾಲಯ, ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಡಿ. 5ರಿಂದ 9ರ ವರೆಗೆ ಉತ್ತರ ಆಫ್ರಿಕದ ಮೊರೊಕ್ಕೊದಲ್ಲಿ ನಡೆಯುವ ‘ಎಸ್‌ಬಿಸಿಸಿ’ ಶೃಂಗಸಭೆಯಲ್ಲಿ ಭಾಗವಹಿಸಲು ಕುಂದಾಪುರ ತಾಲೂಕು ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ಆಯ್ಕೆಯಾಗಿದ್ದಾರೆ.
ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ನೇತೃತ್ವದ ರಾಜ್ಯದ ನಾಲ್ಕು ಜನರ ತಂಡದಲ್ಲಿ ಉದಯಕುಮಾರ ಶೆಟ್ಟಿ, ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಎಲ್. ಮೋಹನ್ ಮತ್ತು ಅಧಿಕಾರಿ ಮಲ್ಲಿಕಾ ಇದ್ದಾರೆ. ಸಾಮಾಜಿಕ ಮತ್ತು ವರ್ತನೆ ಬದಲಾವಣೆ ಸಂವಹನ (Social and Behavior Change Communication) ಕುರಿತಾದ ಈ ಸಭೆಯಲ್ಲಿ ಕರ್ನಾಟಕದ ತಂಡ ಇಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ವಿಷಯ ಮಂಡಿಸಲಿದೆ.
ಮೂರನೆ ಬಾರಿ ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಉದಯಕುಮಾರ ಶೆಟ್ಟಿ ಪಂಚಾಯಿತಿ ಕೇಂದ್ರಿತವಾಗಿ ಮಾದರಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಜತೆಗೆ ಮಹಿಳಾ ಸಬಲೀಕರಣ, ಶಾಲಾಭಿವೃದ್ಧಿ, ಕೋವಿಡ್ ನಿಯಂತ್ರಣ, ಮಾದರಿ ಗ್ರಾಮಸಭೆ, ಸರ್ಕಾರಿ ಕಚೇರಿ ಸಂಕೀರ್ಣಕ್ಕೆ ಚಾಲನೆ ಯೋಜನೆಗಳ ಮೂಲಕ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿರುವರು. ಪಂಚಾಯತ್ ರಾಜ್ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಇವರು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.










