ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.1: ಕುಂದಾಪುರದ ಸಾಹಿತಿ, ಶಿಕ್ಷಕಿ ಸುಮಿತ್ರಾ ಐತಾಳ್ (58) ಅವರು ಇಂದು ಸಂಜೆ ಅಸೌಖ್ಯದಿಂದ ನಿಧನರಾದರು. ಕೆಲ ಸಮಯದಿಂದ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದ ಸೇವೆ ಸಲ್ಲಿಸುತ್ತಿದ್ದ ಸುಮಿತ್ರಾ ಐತಾಳ್ ಅವರು ಕುಂದಾಪ್ರ ಕನ್ನಡದಲ್ಲಿ ರೂಪಕ, ನಾಟಕ, ಸಾಹಿತ್ಯ ರಚನೆ ಮಾಡಿ ಕುಂದಗನ್ನಡಕ್ಕೆ ಅಪಾರ ಸೇವೆ ಸಲ್ಲಿಸಿದ್ದರು.
ಬಿ.ಇಡ್, ಎಂ.ಎ ವ್ಯಾಸಂಗ ಪೂರೈಸಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸುಮಿತ್ರಾ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಭಾವಗಾನ, ಅಂತರಗಂಗೆ, ಗಡಿಯಾರ, ಹಣತೆ, ಮೌನರತಿ ಕವನ ಸಂಕಲನ, ಫಲಿತಾಂಶ ಕಥಾಸಂಕಲನವನ್ನು ಪ್ರಕಟಿಸಿದ್ದರು. ಅಲ್ಲದೇ ವಿಜಯ ಕರ್ನಾಟಕ, ಕುಂದಪ್ರಭ, ಕುಂದಾಪುರ ಮಿತ್ರ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿದ್ದವು. ’ಬಾ ಗೆಳತಿ’ ಮಹಿಳಾ ಸ್ಪಂದನ ಕಾರ್ಯಕ್ರಮ, ದೂರದರ್ಶನದಲ್ಲಿ ಸಾಹಿತ್ಯದ ನುಡಿ ಕಾರ್ಯಕ್ರಮದಲ್ಲಿ ಕೂಡಾ ಅವರು ಭಾಗವಹಿಸಿದ್ದರು.
ಕೆಲವು ದಿನಗಳ ಹಿಂದೆ ಅವರ ಪುಸ್ತಕ ಬಿಡುಗಡೆ, ನಾಟಕ ಪ್ರದರ್ಶನ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರ ಅನಾರೋಗ್ಯದ ಕಾರಣ ಮುಂದೂಡಲಾಗಿತ್ತು. ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದ ಅವರ ಸೇವೆಗಾಗಿ ಹಲವು ಪ್ರಶಸ್ತಿಗಳು ಸಂದಿದ್ದವು. ಅವರು ಪತಿ, ಪುತ್ರನನ್ನು ಅಗಲಿದ್ದಾರೆ.










