ಕುಂದಾಪುರ: ಇಂದು ಪಂಚಾಯಿತಿ ರಾಜ್ ವ್ಯವಸ್ಥೆಯ ತಳಗಟ್ಟಿನ ಒಂದೋಂದೆ ಕಲ್ಲುಗಳು ಜಾರುತ್ತಿದೆ. ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಅಧಿಕಾರ ಸಿಗಬೇಕು ಎನ್ನುವ ಉದ್ದೇಶದ ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕಾಣಬಹುದಾಗಿದೆ. ಈ ಎಲ್ಲಾ ವಿಚಾರಗಳ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಪಂಚಾಯಿತಿ ಹಿತೈಷಿಗಳು ಒಂದೆಡೆ ಸೇರಿ ಸಮಸ್ಯೆಗಳ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ಸರಕಾರದ ಗಮನ ಸೆಳೆಯಬೇಕಾದ ಅಗತ್ಯತೆ ಇದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶುಕ್ರವಾರದಂದು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದ 9ನೇ ದಿನದ ಅಂಗವಾಗಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಜನಾಧಿಕಾರ ಪ್ರತಿಷ್ಠಾನ (ರಿ.) ಕೋಟ ಮತ್ತು ಸಿ.ಎ.ಬ್ಯಾಂಕ್ ಕೋಟ ಸಂಯುಕ್ತ ಆಶ್ರಯದಲ್ಲಿ ಕೋಟತಟ್ಟು ಪಂಚಾಯಿತಿ ಸಾದರ ಪಡಿಸಿದ ಪಂಚಾಯಿತಿ ಹಬ್ಬ ಸುರಾಜ್ಯ ಸ್ವಾತಂತ್ರ್ಯದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದರು. ರಮೇಶ್ ಕುಮಾರ್ ಅವರು ನೀಡಿದ ಪಂಚಾಯಿತಿ ರಾಜ್ಯ ತಿದ್ದು ಪಡಿ ವರದಿಯಲ್ಲಿರುವ ೮೮ ಅಂಶಗಳಲ್ಲಿ ಕೇವಲ 4 ಅಂಶಗಳನ್ನಷ್ಟೆ ಜಾರಿಗೆ ತರಲಾಗಿದೆ, ಒಂದು ವೇಳೆ ಎಲ್ಲಾ ಅಂಶಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರೆ, ನಮ್ಮ ದೇಶದಲ್ಲಿಯೇ ಅತ್ಯುತ್ತಮ ಪಂಚಾಯಿತಿ ರಾಜ್ಯ ವ್ಯವಸ್ಥೆ ಹೊಂದಿದ ರಾಜ್ಯವಾಗುತ್ತಿತ್ತು. ವರದಿಯಲ್ಲಿ ನಮೂದಿಸಿದಂತೆ ರಾಜ್ಯ ಬಜೆಟ್‌ನ ಶೇಕಡಾ 30 ಅನುದಾನ ಪಂಚಾಯತಿಗಳಿಗೆ ಹರಿದು ಬಂದಲ್ಲಿ ಪಂಚಾಯಿತಿ ರಾಜ್ಯ ವ್ಯವಸ್ಥೆ ಮತ್ತೆ ಸದೃಢವಾಗುವುದಲ್ಲದೇ. ಗ್ರಾಮಗಳ ಅಭಿವೃದ್ಧಿ ಹಾದಿಯಲ್ಲಿ ಸಾಗಲು ಅನ್ಯ ಅನುದಾನ ನಿರೀಕ್ಷಿಸಿ ಕುಳಿತುಕೊಳ್ಳುವ ಪ್ರಮೇಯ ತಪ್ಪುತ್ತದೆ. ಅಲ್ಲದೇ ಚುನಾವಣೆಯಲ್ಲಿ ಗೆದ್ದು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಬಳಿಕ ಪಕ್ಷವನ್ನು ಮರೆತು ನಾವೇಲ್ಲ ಒಂದೆ ಎನ್ನುವ ಕಲ್ಪನೆಯಲ್ಲಿ ಸದಸ್ಯರು ಕಾರ್ಯಪ್ರವೃತ್ತರಾದರೆ ಮುಂದಿನ 5 ವರ್ಷಗಳಲ್ಲಿ ಪಂಚಾಯಿತಿ ಅಭಿವೃದ್ಧಿ ನಿಶ್ಚಿತ. ಇಂದು ಪಂಚಾಯಿತಿಯಲ್ಲಿ ಇರುವಂತೆ ವ್ಯವಸ್ಥೆಯನ್ನೇ ಸರಿಪಡಿಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಉದ್ಘಾಟಿಸಿ ಶುಭ ಹಾರೈಸಿದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ವಿರೋಧ ಪಕ್ಷದ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್, ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಕಾರ್ಕಳ ತಾಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಾ ಕುಮಾರಿ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ರೋ.ಸಂತೋಷ ಪ್ರಭು, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಉಡುಪಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಯ್ಕ್, ಉಡುಪಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಹೆಗ್ಡೆ, ಮಮತಾ ಶೆಟ್ಟಿ, ಸುನೀತಾ ರಾಜಾರಾಂ, ಗಣಪತಿ ಶ್ರೀಯಾನ್, ಉಡುಪಿ ತಾಲೂಕು ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಕಾಂಚನ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಂತಹ ದರೇಗುಡ್ಡೆ ಗ್ರಾಮ ಪಂಚಾಯಿತಿ, ಕನ್ನಕಮಜಲು ಗ್ರಾಮ ಪಂಚಾಯಿತಿ, ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ,ಬ ಮುಂಡಾಜೆ ಗ್ರಾಮ ಪಂಚಾಯಿತಿ, ಕಾವಳಪಡೂರು ಗ್ರಾಮ ಪಂಚಾಯಿತಿ, ಉಡುಪಿ ಜಿಲ್ಲೆಯ ವರಂಗ ಗ್ರಾಮ ಪಂಚಾಯಿತಿ, ಹೆಂಗವಳ್ಳಿ ಗ್ರಾಮ ಪಂಚಾಯಿತಿ ಮತ್ತು ಕೋಟತಟ್ಟು ಗ್ರಾಮ ಪಂಚಾಯಿತಿಗಳಿಗೆ ಶಿವರಾಮ ಕಾರಂತ ಪ್ರಶಸ್ತಿ ವಿತರಣೆ ಮಾಡಲಾಯಿತು. ಅಲ್ಲದೇ 2014-15ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಉಭಯ ಜಿಲ್ಲೆಯ ಪಂಚಾಯಿತಿಗಳಾದ ತೆರಿಗೆ ಸಂಗ್ರಹಣೆಯಲ್ಲಿ ಕೇಪು ಮತ್ತು ಅಲಂಕಾರು ಗ್ರಾಮ ಪಂಚಾಯಿತಿ ಜಂಟಿಯಾಗಿ, ತೆಂಕಮಿಜಾರು ಗ್ರಾಮ ಪಂಚಾಯತಿಗೆ ಸ್ವಚ್ಛ್ ಭಾರತ್ ಪ್ರಶಸ್ತಿ, ಸಮಗ್ರ ಸಾಧನ ಪ್ರಶಸ್ತಿ ರಾಮಕುಂಜ ಗ್ರಾಮ ಪಂಚಾಯತಿಗೆ, ಸಂಗ್ರಹಣೆ ಮಾಡಿದ ಕಿರಿಮಂಜೇಶ್ವರ ಗ್ರಾಮ ಪಂಚಾಯತಿಗೆ, ಯರ್ಲಪಾಡಿ ಗ್ರಾಮ ಪಂಚಾಯತಿಗೆ ಸ್ವಚ್ಛ್ ಭಾರತ್ ಪ್ರಶಸ್ತಿ, ಸಮಗ್ರ ಸಾಧನ ಪ್ರಶಸ್ತಿ ಬಿಲ್ಲಾಡಿ ಗ್ರಾಮ ಪಂಚಾಯತಿಗೆ ಮತ್ತು ಉಡುಪಿ ಜಿಲ್ಲಾ ಪಂಚಾಯತಿಗೆ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಪ್ರಶಸ್ತಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಜರ್ನಾದನ ಮರವಂತೆ ವಿಷಯ ಮಂಡನೆ ಮಾಡಿದರು. ಆಯ್ಕೆ ಸಮಿತಿಯ ಟಿ.ಬಿ.ಶೆಟ್ಟಿ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಪ್ರತಿಷ್ಠಾನದ ಸದಸ್ಯ ಶಿಕ್ಷಕ ಸಂಜೀವ ಜಿ. ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದಂತಹ ಲೋಕೇಶ್ ಶೆಟ್ಟಿ, ಸದಸ್ಯರಾದ ರಘು ತಿಂಗಳಾಯ, ಉಮಾ ಎಸ್.ಉಪಾಧ್ಯ, ಸತೀಶ್ ಬಾರಿಕೆರೆ, ವಾಸು ಪೂಜಾರಿ, ಪಾರ್ವತಿ, ಸುಜಾತ ಎನ್., ಸರಸ್ವತಿ, ಸೀತಾ, ಜಯಪ್ರಕಾಶ್, ಅಕ್ಕು, ಶ್ಯಾಮಲ ಇವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು.
ಕೋಟತಟ್ಟು ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ಶ್ರೀಮತಿ ಪಾರ್ವತಿ, ಕಾರ್ಯದರ್ಶಿ ಮೀರ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.