ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಬಿವಿಪಿ ಕುಂದಾಪುರ ಆಶ್ರಯದಲ್ಲಿ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪದವಿ ಕಾಲೇಜು, ಭಂಡಾರ್‌ಕಾರ‍್ಸ್ ಕಾಲೇಜು ಹಾಗೂ ಕೋಟೇಶ್ವರ ಕಾಗೇರಿ ವರದರಾಜ ಶೆಟ್ಟಿ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಮಿನಿ ವಿಧಾನ ಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಆಕ್ರೋಶ ಹೊರಹಾಕಿದ ವಿದ್ಯಾರ್ಥಿಗಳು ಫಲಿತಾಂಶ ಕ್ಲಪ್ತ ಸಮಯದಲ್ಲಿ ಪ್ರಕಟವಾಗುತ್ತಿಲ್ಲ. ಪರೀಕ್ಷೆ ಮುಗಿದು ವರ್ಷ ಹತ್ತಿರವಾದರೂ ಮೌಲ್ಯಮಾಪನ ನೆನೆಗುದಿಗೆ. ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣ, ಉದ್ಯೋಗ ದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಾಗದಿದ್ದರೆ ಮಂಗಳೂರು ವಿವಿ ಕುಲಪತಿ ಕುರ್ಚಿ ಖಾಲಿಮಾಡಲಿ ಎಂದು ಎಚ್ಚರಿಕೆ ನೀಡಿದರು.
ಕೋಟೇಶ್ವರ ಕಾಗೇರಿ ವರದರಾಜ ಶೆಟ್ಟಿ ಪದವಿ ಕಾಲೇಜು ವಿದ್ಯಾರ್ಥಿ ಪ್ರಮುಖ್ ರಾಹುಲ್ ಶೆಟ್ಟಿ ಮಾತನಾಡಿ, ಅಂಕಪಟ್ಟಿ ಬರದ ಕಾರಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಆಗುತ್ತಿಲ್ಲ. ಅಂಕಪಟ್ಟಿಕೊಳ್ಳಲು ಬೈಂದೂರಿನಿಂದ ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಹೋಗುವುದಕ್ಕೆ ಸಾವಿರಾರು ರೂ. ಖರ್ಚು ಮಾಡಿದರು ಸಹ ಅದೇ ದಿನದಲ್ಲಿ ಅಂಕಪಟ್ಟಿ ಸಿಗುವುದಿಲ್ಲ. ಎರಡು ಮೂರು ಬಾರಿ ಅಲೆಯ ಬೇಕಾಗುತ್ತದೆ. ವಿದ್ಯಾರ್ಥಿಗಳ ಸಮಸ್ಯೆ ಹದಿನೈದು ದಿನದೊಳಗೆ ಪರಿಹಾರ ಮಾಡದಿದ್ದರೆ ವಿವಿಗೆ ಮುತ್ತಿಗೆ ಹಾಕಿ ದೊಡ್ಡಮಟ್ಟದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಎಬಿವಿ ತಾಲೂಕು ಸಂಚಾಲಕ ಧನುಷ್ ಪೂಜಾರಿ ಮಾತನಾಡಿ, ಎನ್‌ಇಪಿ ಅನುಷ್ಠಾನ ಸರಿಯಾಗಿ ಮಾಡಿಲ್ಲ ಇದರಿಂದ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದು, ವಿಶ್ವ ವಿದ್ಯಾಲಯಕ್ಕೂ ಗೊಂದಲವಿದೆ. ಸಾಮಾನ್ಯ ಕಾಲೇಜ್ ವಿಶ್ವವಿದ್ಯಾನಿಲಯಕ್ಕಿಂತ ಉತ್ತಮ ಯೋಜನೆ ಮಾಡುತ್ತಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸರಿಯಾದ ಯೋಜನೆಯಿಲ್ಲದೆ ವಿದ್ಯಾರ್ಥಿಗಳ ಅಂತತ್ರರನ್ನಾಗಿಸಿದ್ದಾರೆ ಎಂದರು.
ವಿದ್ಯಾರ್ಥಿನಿ ಪ್ರತಿಕ್ಷಾ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆದುಕೊಳ್ಳಲು ಹೋದರೆ ವಿಶ್ವವಿದ್ಯಾನಿಲಯದಿಂದ ಯಾವುದೇ ಒಂದು ಪ್ರತಿಸ್ಪಂದನವಿಲ್ಲ.ಮರು ಪರೀಕ್ಷೆ ಕಟ್ಟಿದಾಗ ಫಲಿತಾಂಶ ಬರುವುದು ತುಂಬಾ ತಡವಾಗುತ್ತದೆ.ಫೇಲ್ ಆದಾಗ ವಿದ್ಯಾರ್ಥಿಗಳು ದಂಡವನ್ನು ಕಟ್ಟಿ ಮರು ಪರೀಕ್ಷೆಗೆ ಅರ್ಜಿ ಹಾಕುತ್ತಾರೆ. ಆದರೆ ಮರು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾವು ಕಟ್ಟಿದ ದಂಡದ ಶುಲ್ಕ ವಾಪಾಸು ಒಂದು ವರ್ಷವಾದರೂ ಬರುವುದಿಲ್ಲ. ಪ್ರಮೋಟ್ ಮಾಡುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗುತ್ತಿದೆ ಎಂದರು.
ಬಿ ಬಿ ಹೆಗ್ಡೆ ಕಾಲೇಜ್ ಘಟಕ ಅಧ್ಯಕ್ಷ ವಿಘ್ನೇಶ್ ಶೆಟ್ಟಿ, ಭಂಡಾರ್‌ಕಾರ್ಸ್ ಕಾಲೇಜು ಘಟಕ ಅಧ್ಯಕ್ಷ ವೀಕ್ಷಿತ್, ಕಾಗೇರಿ ಕಾಲೇಜು ಘಟಕ ಅಧ್ಯಕ್ಷ ಚೇತನ್, ತಾಲೂಕು ವಿದ್ಯಾರ್ಥಿ ಒಕ್ಕೂಟ ಪ್ರಮುಖ ದ್ವನಿ, ಪ್ರಜ್ಞಾ, ಅಪೂರ್ವ ಪ್ರತಿಭಟನೆ ನೇತೃತ್ವ ವಹಿಸಿದ್ದರು.