ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ವೃತ್ತಿಯಲ್ಲಿ ಭಿನ್ನತೆ ಇದ್ದರೂ ಪ್ರವೃತ್ತಿಯಲ್ಲಿ ಕಲಾವಿದರಾಗಿ ಬಣ್ಣಹಚ್ಚಿ ಸಾಂಸ್ಕೃತಿಕ ಹಿರಿಮೆಯನ್ನು ಸಾರಿದರು ಜಾಂಬೂರಿ ಮೆರವಣಿಗೆಯ ಕಲಾವಿದರು. ಕರ್ನಾಟಕ, ಕೇರಳ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ ಕಲಾವಿದರ ವೃತ್ತಿ ಜೀವನದ ಬಗ್ಗೆ ಕುತೂಹಲವಿದೆಯೆ?
ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇರಳದ ‘ಹರಿಶ್ರೀ ಕಲಾಸಮಿತಿ’ಯ ತಂಡದ ಕಲಾವಿದನಿಗೆ ಸುಬ್ರಹ್ಮಣ್ಯ ದೇವರ ವೇಷ ಧರಿಸುವುದೆಂದರೆ ವಿಶೇಷ ಆಸಕ್ತಿ. ಸುಬ್ರಹ್ಮಣ್ಯ ದೇವರ ವೇಷಧಾರಣೆಯ ಮೂಲಕ ಅವರದ್ದು ಅನನ್ಯ ಭಕ್ತಿಯ ಸಮರ್ಪಣೆ.
ವೃತ್ತಿ ರಂಗದಲ್ಲಿರುವವರು ಮಾತ್ರವಲ್ಲದೆ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಸ್ವ-ಇಚ್ಛೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ‘ಪಾಣೆ ಮಂಗಳೂರು ಶಾರದಾ ಚೆಂಡೆ’ಯ ತಂಡದಲ್ಲಿಯೂ ಯುವ ಪ್ರತಿಭಾನಿತ್ವರಿದ್ದು ವಿದ್ಯಾರ್ಥಿಗಳು ತಂಡದ ಸದಸ್ಯರಾಗಿದ್ದುದದು ವಿಶೇಷವಾಗಿತ್ತು.
ಆಟೋ ಚಾಲಕ, ಪೇಂಟರ್ ಹೀಗೆ ವಿಭಿನ್ನ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದವರು ಯಾವುದೇ ವಯಸ್ಸಿನ ಹಂಗಿಲ್ಲದೆ ವಿದ್ಯಾರ್ಥಿಗಳಿಂದ ಹಿಡಿದು, ವಯಸ್ಕರೂ ಸೇರಿದಂತೆ ಕರಗ, ಗೊಂಬೆ ವೇಷ, ಪುರವಂತಿಕೆ, ಕತಕ್ಕಳಿ, ದೇವ ನೃತ್ಯ, ನವಿಲು ನೃತ್ಯಗಳನ್ನೊಳಗೊಂಡಂತೆ ವಿವಿಧ ಕಲಾ ಪ್ರಕಾರಗಳ ಸುಮಾರು ಮೂರು ಸಾವಿರ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಲೆಯ ಅಗಾಧ ಸಾಧ್ಯತೆಗೆ ಸಾಕ್ಷಿಯಾಗಿತ್ತು.
- ವರದಿ: ರಕ್ಷಾ ಕೋಟ್ಯಾನ್, ದ್ವಿತೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಕಾಲೇಜು ಉಜಿರೆ.
- ಚಿತ್ರ: ಅರ್ಪಿತ್ ಇಚ್ಛೆ