ಜಾಂಬೂರಿಯಲ್ಲಿ ಭಾವದ ರಂಗು ಚೆಲ್ಲಿದ ರಂಗಗೀತೆಗಳು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ:
ಜಾತ್ರೆ, ಗದ್ದಲ, ಜನಜಂಗುಳಿ ಇವೆಲ್ಲದರ ನಡುವೆ ಕಿವಿಗೆ ಇಂಪಾದ ಮತ್ತು ಹುಮ್ಮಸ್ಸು ತುಂಬುವ ರಂಗಗೀತೆಗಳನ್ನು ಕೇಳುವ ಅವಕಾಶ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಳ್ವಾಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಕಲಾಪ್ರೇಕ್ಷಕರಿಗೆ ಲಭಿಸಿತ್ತು.

Call us

Click Here

ಮೂಡಬಿದರೆಯ ಆಳ್ವಾಸ್ ಆವರಣದ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ’ರಂಗಗೀತೆಗಳು’ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ಬಳಗದ ಪ್ರದರ್ಶನ ನೆರೆದಿದ್ದವರನ್ನು ರಂಜಿಸಿತು.

ಮೊದಲಿಗೆ ಹಯವದನ ನಾಟಕದ ಬಿ.ವಿ ಕಾರಂತರ ಸಂಯೋಜನೆಯ ’ಗಜವದನ ಹೇ ರಂಭಾ’ ಹಾಡಿನ ಮೂಲಕ ’ಪ್ರೇಕ್ಷಕರೇ ನಾಟಕದ ಮಾಲೀಕ’ ಎಂಬ ಸಂದೇಶವನ್ನು ಗೀತೆಯ ಮೂಲಕ ಜನರ ಮನಮುಟ್ಟಿಸಿದರು.

ಹಾರ್ಮೋನಿಯಂ, ಖಂಜೀರಾ, ತಬಲ, ಡೋಲಕ್, ಗೆಜ್ಜೆ, ತಾಳ ಹೀಗೆ ಹಲವಾರು ವಾದನಗಳ ಮಿಳಿತ ನೆರೆದಿದ್ದ ಪ್ರೇಕ್ಷಕರ ಗಮನವನ್ನು ವೇದಿಕೆಯ ಮೇಲಿರುವವರ ಮೇಲೆ ಸೆಳೆಯುವಂತೆ ಮಾಡಿದರು. ಜಾನಪದ ಗೀತೆಗಳಿಗೆ ಭದ್ರ ಬುನಾದಿಯಾಗಿರುವ ರಂಗಭೂಮಿಯಲ್ಲಿ ಇನ್ನೂ ಹಲವಾರು ಜಾನಪದ ಗೀತೆಗಳು ಅನುರಣಿಸುತ್ತಿದೆ, ಅಂತಹದ್ದೇ ಒಂದು ರಂಗಗೀತೆಯಾದ ’ಗೋವಿಂದ ಮುರಹರ ಗೋವಿಂದ’ ಗೀತೆ ಪ್ರೇಕ್ಷಕರನ್ನು ಭಕ್ತಿವರವಶರನ್ನಾಗಿಸಿತು.

ಪು.ತಿ.ನ ಅವರ ಅದ್ಭುತವಾದ ರಚನೆಯ ’ಗೋಕುಲ ನಿರ್ಗಮನ’ ನಾಟಕದ ’ಬಾ ಸಖಿ ಬಾ ಸಖಿ’ ಎಂಬ ರಾಧೆಯ ವೃಂದಾವನದ ಆಟಗಳ ವರ್ಣಿಸುವ ಹಾಡು ಪ್ರಸ್ತುತ ಪಡಿಸಿದ ಶ್ರೀಮತಿ ರತ್ನಾ, ಬಿ.ವಿ ಕಾರಂತರ ರಚನೆಗೆ ಮತ್ತಷ್ಟು ಮೆರುಗು ತಂದರು. ನಂತರ ಚಂದ್ರಶೇಖರ್ ಹೆಗ್ಗೊಟ್ಟಾರ್ ಹಾಡಿದ ’ಸತ್ತವರ ನೆರಳು’ ನಾಟಕದ ’ಜೋ ಜೋ ಶ್ರೀ ಕೃಷ್ಣ ’ ಗೀತೆ ಮಮತೆ ತುಂಬಿದ ಜೋಗುಳದಂತಿತ್ತು.

Click here

Click here

Click here

Click Here

Call us

Call us

ಅಂಬಿಕಾತನಯದತ್ತ ದ.ರಾ ಬೇಂದ್ರೆಯವರ ’ಮರುಳು ಮಾಡಕ್ಕೆ ಹೋಗಿ’ ಅರ್ಥಗರ್ಭಿತ ಕವನ ಸಾಲುಗಳಿಗೆ ಚಂದ್ರಶೇಖರ್ ಹೆಗ್ಗೊಟ್ಟಾರ್ ಕಂಠ ಜೀವ ತುಂಬಿತು. ಸುಬ್ರಮಣ್ಯ ಮೈಸೂರ್ ನುಡಿಸಿದ ಪಕ್ಕವಾದ್ಯಗಳಾದ ತಬಲಾ, ಡೋಲಕ್, ಖಂಜೀರಗಳೆಲ್ಲವೂ ತಾಳಬದ್ಧವಾಗಿ, ಲಯಬದ್ಧವಾಗಿ ಜನರ ಮನಸ್ಸನ್ನು ಸೇರಿಬಿಟ್ಟಿತು.

ರಂಗಗೀತೆಗಳು ಆಧುನಿಕ ಸ್ಪರ್ಶ ಕಂಡಿದ್ದರೂ, ಪೌರಾಣಿಕ ನಾಟಕಗಳ ಸಂಗೀತ ಹಚ್ಚಹಸುರಾಗಿದೆ ಎಂಬ ಮಾತಿಗೆ ಸಾಕ್ಷಿಯಂತೆ ’ರಂಜಿಪಳೀ ತರುಣಿ’ ಎಂಬ ಶೃಂಗಾರ ಗೀತೆ ಪ್ರೇಕ್ಷಕರನ್ನು ರಸಗಡಲಲ್ಲಿ ತೇಲಿಸಿ ಬಿಟ್ಟಿತು. ’ಜೋಕುಮಾರ ಸ್ವಾಮಿ’ ನಾಟಕದ ಗೌಡ್ತಿ ಪಾತ್ರ ಮಕ್ಕಳಿಗಾಗಿ ತವಕಿಸುತ್ತಿರುವ ಸಾಲುಗಳನ್ನು ಹೊಂದಿದ ’ ಮೂಡಿ ಬಾರಯ್ಯ ಬಾರೋ ಗಿಣಿರಾಮ ಹಾಡು’ ಆ ಪತ್ರವನ್ನು ಜನರ ಕಣ್ಣಿಗೆ ಕಟ್ಟಿಕೊಡುವಂತಿತ್ತು.

ಜಗದೊಳಗೆ ಎಲ್ಲರೂ ಕಳ್ಳರೇ, ಆದರೆ ಬೇರೆ ಬೇರೆ ಕಾರಣಕ್ಕಷ್ಟೇ ಎಂಬ ಅರ್ಥ ಹೊಂದಿದ್ದ ’ಸದಾರಮೆ’ ನಾಟಕದ ’ಇರೋರೆಲ್ಲ ಬರೋರೆಲ್ಲ ದುಡ್ಡಿಗಾಗಿ’ ಎಂಬ ಹಾಡು ಪ್ರಸ್ತುತ ಸಮಾಜಕ್ಕೆ ಕೈಗನ್ನಡಿ ಹಿಡಿದಂತಿತ್ತು. ಅನೇಕ ರಂಗಾಸಕ್ತರ ನೆಚ್ಚಿನ ಗೀತೆಯೆಂದೇ ಕರೆಯಲ್ಪಡುವ ’ಬಂದಾನೋ ಬಂದ ಸವಾರ’ ಹಾಡು ಮತ್ತೊಮ್ಮೆ ನೆರೆದಿದ್ದ ಜನಮಾನಸದ ನೆಚ್ಚಿನ ಹಾಡಾಯಿತು.

ಸತ್ಯ ಹರಿಯುವ ನೀರಿನ ಹಾಗೆ ಅದರ ಮೇಲೆ ಚಿತ್ರವನ್ನು ಕೆತ್ತುವುದಕ್ಕೆ ಆಗುವುದಿಲ್ಲ, ಕತ್ತಿಯಿಂದ ಅದನ್ನು ಗಾಯ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಅರ್ಥಗರ್ಭಿತ ಸಾಲುಗಳನ್ನು ಒಳಗೊಂಡ ’ಹಯವದನ’ ನಾಟಕದ ’ನದಿಗೆ ನೆನಪಿನ ಹಂಗಿಲ್ಲ’ ಗೀತೆ ಜನರನ್ನು ತನ್ನ ಶೃತಿ ಶುದ್ಧತೆಯ ಮೂಲಕವೇ ಮೂಕವಿಸ್ಮಿತರನ್ನಾಗಿಸಿತ್ತು.

ಚಂದ್ರಶೇಖರ್ ಹೆಗ್ಗೊಟ್ಟಾರ್, ರತ್ನ, ಸುಬ್ರಮಣ್ಯ ಮೂವರ ಕಂಠದಲ್ಲಿ ಮೂಡಿಬಂದ ’ಗೋಕುಲ ನಿರ್ಗಮನ’ ನಾಟಕದ ಎಲ್ಲವಳೆಲ್ಲವಳೆಲ್ಲವಳು’ ಹಾಡು ವೃಂದಾವನದಲ್ಲಿ ಕೃಷ್ಣ ರಾಧೆಯ ಹುಡುಕುತ್ತಿರುವ ಪರಿಯನ್ನು ಕಣ್ಣಿಗೆ ಕಟ್ಟುವಂತೆ ಹಾಡಿದಂತಿತ್ತು. ಮಕ್ಕಳ ನಾಟಕ ಎಂದೇ ಖ್ಯಾತಿಯಾಗಿರುವ ’ಪಂಜರ ಶಾಲೆ’ ನಾಟಕದ ’ದೂರ ದೂರ ಗಗನಕೆ’ ಹಾಡಿನ ಮೂಲಕ ಕಾರ್ಯಕ್ರವನ್ನು ಕೊನೆಗೊಳಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ತಂಡಕ್ಕೆ ಕಾರ್ಪೊರೇಶನ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಸುಧೀರ್ ಸ್ಮರಣಿಕೆ ನೀಡಿ ಗೌರವಿಸಿದರು.

  • ವರದಿ – ಅರ್ಪಿತ್ ಇಚ್ಛೆ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ, ಉಜಿರೆ.

Leave a Reply