ಸಿಂಧು ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.
ವಿದ್ಯಾಗಿರಿ: ಅಲ್ಲಿ ವಿದ್ಯಾರ್ಥಿಗಳು ಆಕಾಶಕ್ಕೆ ಏಣಿಹಾಕಿ ಮೇಲೇರುತ್ತಿದ್ದರು. ಹಗ್ಗದ ಮೇಲೆ ಸೈಕಲ್ ಓಡಿಸಿ ಹುಬ್ಬೇರಿಸುವಂತೆ ಸವಾಲುಗಳನ್ನು ಎದುರಿಸುತ್ತಿದ್ದರು. ಎದೆ ಝಲ್ ಎನ್ನಿಸುವ ಸರ್ಕಸ್‌ಗಳನ್ನು ಸಲೀಸಾಗಿ ಸಂಪೂರ್ಣಗೊಳಿಸಿ ವಿಶೇಷ ಬ್ಯಾಡ್ಜ್ ಪಡೆಯುವುದಕ್ಕಾಗಿ ಸಾಲುಗಟ್ಟಿದ್ದರು. ವಿದ್ಯಾರ್ಥಿಗಳಿಗೆ ಇಂಥದ್ದೊಂದು ಅವಕಾಶ ಒದಗಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಚಾಲೆಂಜ್ ವ್ಯಾಲಿ.
ನಾನಾ ಬಗೆಯ ಸಾಹಸ ಕ್ರೀಡೆಗಳಿಗೆ ಚಾಲೆಂಜ್ ಹಾಕಿ ಕೈಬೀಸಿ ಕರೆಯುತ್ತಿದೆ ಜಾಂಬೂರಿಯ ಈ ಚಾಲೆಂಜ್ ವ್ಯಾಲಿ. ಒಟ್ಟು 35 ವಿಧದ ಕಸರತ್ತುಗಳಿರುವ ಈ ಕ್ರೀಡಾ ಲೋಕದಲ್ಲಿ ಪ್ರತಿನಿತ್ಯ 8ರಿಂದ ಇಂದ 10 ಸಾವಿರ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು ಡಿಸೆಂಬರ್ 26ರಿಂದ ಸಾರ್ವಜನಿಕರಿಗೂ ಮುಕ್ತ ಅವಕಾಶ ಒದಗಿಸಲಾಗುತ್ತದೆ. ಪ್ರತಿಯಂದು ಸಾಹಸಗಳು ನುರಿತರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಅಂತರಾಷ್ಟ್ರೀಯ ಸ್ಕೌಟ್ಸ್ ಸಹಾಯಕ ಆಯುಕ್ತ ಮಧುಸೂದನ, ರಾಷ್ಟ್ರೀಯ ನಿರ್ದೇಶಕ ಕೃಷ್ಣ ಸ್ವಾಮಿ, ಜಿಮ್ಮಿ ಸಿಕ್ವೇರ್ ಸೇರಿದಂತೆ ಹಲವರು ಸಾಹಸ ಕ್ರೀಡೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಟೈರ್ ಬ್ಯಾಲೆನ್ಸ್, ಮಂಕಿ ಬ್ರಿಡ್ಜ್, ಏರಿಯಲ್ ರನ್ ವೇ, ಬ್ಯಾಲೆನ್ಸ್ ವಾಕ್, ನೆಟ್ ಕ್ರಾಲಿಂಗ್, ಲ್ಯಾಡರ್ ಸ್ವಿಂಗ್, ಫ್ಲೋರ್ ಲೆಗ್ ಟವರ್, ರ‍್ಯಾಪ್ಲಿಂಗ್ ಆಂಡ್ ವಾಲ್ ಕ್ಲೈಂಬಿಂಗ್, ವಾಟರ್ ಫಾಲ್ ನಂತಹ ಸಾಹಸ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. 30 ಸಾಹಸ ಪ್ರದರ್ಶನ ಪೂರ್ಣಗೊಳಿಸಿದ ಬಳಿಕ ಗೌರವ ಬ್ಯಾಡ್ಜ್ ಗಳನ್ನು ನೀಡಲಾಗುತ್ತದೆ. ಕಳೆದ ಒಂದೂವರೆ ತಿಂಗಳಿಂದ ಈ ಚಾಲೆಂಜ್ ವ್ಯಾಲಿಯ ನಿರ್ಮಾಣ ಕಾರ್ಯ ಆರಂಭಿಸಿದ್ದು ದೇಶದ ವಿವಿದ ಭಾಗಗಳ ಸ್ಕೌಟ್ಸ್,ಗೈಡ್ಸ್ ಹಾಗೂ ರೋವರ‍್ಸ್ ರೇಂಜರ‍್ಸ್ ವಾಲೆಂಟೀರ‍್ಸ್‌ಗಳ ಪರಿಶ್ರಮದಿಂದ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿದೆ.
ಎಂಟು ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಚಾಲೆಂಜ್ ವ್ಯಾಲಿ ವಿದ್ಯಾರ್ಥಿಗಳಲ್ಲಿನ ಸಾಹಸ ಪ್ರವೃತ್ತಿ ಮತ್ತು ಸ್ಥೈರ್ಯ ಹೆಚ್ಚಿಸುತ್ತಿದ್ದು ಜಾಂಬೂರಿಯಲ್ಲಿ ಭಾಗವಹಿಸಿರುವ ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ವಿಶೇಷ ಆಕರ್ಷಣೆ.
- ವರದಿ: ಸಿಂಧು ಹೆಗಡೆ, ದ್ವಿತೀಯ ವರ್ಷ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರ ಉಜಿರೆ
- ಚಿತ್ರ: ಆಶಿಶ್ ಯಾದವ್