ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಸಹಜ ನಟನೆ ಹಾಗೂ ಹಾಸ್ಯದ ಮೂಲಕ ಜೀವನ ಪಾಠಗಳನ್ನು ಜನರಿಗೆ ತಲುಪುವುದು ಒಂದು ಅಧ್ಬುತ ಕಲೆ. ಹೀಗೆ ವಿಭಿನ್ನ ಪಾತ್ರಗಳೊಂದಿಗೆ ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರು ಒಂದಿಷ್ಟೂ ಕದಲದಂತೆ ಸೆಳೆದದ್ದು ಫ್ರೆಂಡ್ಸ್ ಮಂಗಳೂರು ಮತ್ತು ಪ್ರಶಂಸಾ ಕಾಪು ತಂಡದ ’ತುಳುಹಾಸ್ಯ’ ಕಾರ್ಯಕ್ರಮ.
ಮೂಡಬಿದ್ರೆಯ ಆಳ್ವಾಸ್ ಆವರಣದ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ೨೦೨೨ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಮೊದಲ ದಿನದಂದು ಕೃಷಿಸಿರಿ ವೇದಿಕೆಯಲ್ಲಿ ನಡೆದ ’ತುಳುಹಾಸ’ ಕಾರ್ಯಕ್ರಮ ನೆರೆದ ಜನ ಸಮೂಹವನ್ನು ನಗುವಿನ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.
ಬಾಯಿ ತುಂಬ ನಗಬೇಕು ಎಂಬ ಹಾಡಿನೊಂದಿಗೆ ಉತ್ತಮ ಆರಂಭವನ್ನು ನೀಡಿದ ಪ್ರಶಂಸಾ ಕಾಪು ತಂಡದಲ್ಲಿ ಕಲಾವಿದರ ಪರದೆಯ ಹಿಂದಿನ ನಿಜವಾದ ಪರಿಶ್ರಮದ ವಿಚಾರ ಅಡಕವಾಗಿತ್ತು. ಮಕ್ಕಳಿಗೆ ಸೋಲನ್ನು ಎದುರಿಸಲು ಕಲಿಸಬೇಕು, ಅದುವೇ ಗೆಲುವಿನ ಹಾದಿಯೆಂಬ ಉತ್ತಮ ಸಂದೇಶವನ್ನು ನೀಡಿದವರು ಫ್ರೆಂಡ್ಸ್ ಮಂಗಳೂರು ತಂಡದ ಕಲಾವಿದರು.
ಕಲಾ ತಂಡವನ್ನು ಮುನ್ನಡೆಸುವ ನಾಯಕನಿಗೆ ಇತರೆ ಕಲಾವಿದರನ್ನು ಒಗ್ಗೂಡಿಸಿ ಅಭಿನಯಿಸುವಾಗ ಯಾವೆಲ್ಲ ಎಡವಟ್ಟುಗಳಾಗುತ್ತವೆ ಎಂಬುದನ್ನು ಹಾಸ್ಯದ ಮೂಲಕ ವಿವರಿಸಿದರು. ಯಾವುದೇ ಅಂಜಿಕೆ ಇಲ್ಲದೆ ಪ್ರತೀ ಪಾತ್ರಕ್ಕೂ ಜೀವ ತುಂಬಿದ ಕಲಾವಿದರ ಪ್ರತಿಭೆ ಮೆಚ್ಚುವಂತಹದು.
ಖಾಸಗಿ ಕಾರ್ಯಕ್ರಮದ ನಿರೂಪಣೆಯಲ್ಲಿ ತುಳುನಾಡಿನ ವಿಭಿನ್ನ ಮನಸ್ಥಿತಿಯ ಮೂವರು ಅತಿಥಿಗಳನ್ನು ಸುಂದರವಾಗಿ ಚಿತ್ರಿಸಲಾಗಿತ್ತು. ಕುಡುಕರ ಸಂಘದ ಅಧ್ಯಕ್ಷ ಬಸಪ್ಪ, ನಾಟಿ ವೈದ್ಯ ಹಾಗೂ ಸ್ತ್ರೀ ಪಾತ್ರಧಾರಿ ಉಮಾಶಂಕರ್ ನಡುವಿನ ಸಂಭಾಷಣೆ ಮತ್ತೆ ಮತ್ತೆ ಕೇಳುವಂತಿತ್ತು. ಈ ಹಾಸ್ಯಮಯ ದೃಶ್ಯವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕರ ಪ್ರತಿಕ್ರಿಯೆಯೂ ಮನಸ್ಸಿಗೆ ಖುಷಿ ನೀಡುತ್ತಿತ್ತು.
ಮಗಳನ್ನು ಶ್ರೇಷ್ಠ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ತಾಯಿ ಮಾಧ್ಯಮದೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಾಸ್ಯಭರಿತವಾಗಿ ಹಂಚಿಕೊಳ್ಳುತ್ತಿದ್ದರು. ಸದಾ ಕ್ರಿಕೇಟ್ ಬೆಟ್ಟಿಂಗ್‌ನಲ್ಲಿ ಮುಳುಗಿರುವ ವ್ಯಕ್ತಿಯೊಬ್ಬ ನಿರೂಪಕನನ್ನೇ ಮುಜುಗರಗೊಳಿಸಿ ಪಂದ್ಯದಲ್ಲಿ ಹಣಗಳಿಸಿದ ರೀತಿ ಆತುರದ ನಿರ್ಧಾರ ಒಳ್ಳೆಯದಲ್ಲ ಎಂಬುದನ್ನು ನಿರೂಪಿಸುತ್ತಿತ್ತು.ಹೀಗೆ ತುಳು ಸಂಭಾಷಣೆಯೊಂದಿಗೆ ಒಬ್ಬರನ್ನೊಬ್ಬರು ಕಾಲೆಳೆಯುತ್ತಿದ್ದ ದೃಶ್ಯ ಎಂತವರೂ ಒಮ್ಮೆ ವೇದಿಕೆಯತ್ತ ಇಣುಕುವಂತೆ ಮಾಡುತ್ತಿತ್ತು.
ಕಲಾವಿದರೂ ವೇದಿಕೆಯ ತಮ್ಮ ಅನುಭವವನ್ನು ಹಂಚಿಕೊಂಡು ಹರುಷ ವ್ಯಕ್ತಪಡಿಸಿದರು. ಪ್ರತೀ ವರ್ಷವೂ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮವನ್ನು ನೀಡುತ್ತಿದ್ದು, ಈ ಬಾರಿಯೂ ಉತ್ತಮ ಅವಕಾಶವನ್ನು ಮಾಡಿಕೊಟ್ಟ ಸಂಸ್ಥೆಗೆ ಆಭಾರಿ ಎಂದು ಕಲಾವಿನ ಪ್ರಸನ್ನ ಶೆಟ್ಟಿ ಹೇಳಿದರು.
ಪ್ರತೀ ಬಾರಿ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಬಂದಾಗ ತಮ್ಮ ಮನೆಗೆ ಬಂದ ಅನುಭವವಾಗುತ್ತದೆ. ಕಲಾವಿದರಿಗೆ ಸಂಸ್ಥೆಯ ಅಧ್ಯಕ್ಷರು ಉತ್ತಮ ಪ್ರೋತ್ಸಾಹ ನೀಡುತ್ತಾರೆ ಎಂದು ಮಂಗಳೂರು ಫ್ರೆಂಡ್ಸ್ ತಂಡದ ಕಲಾವಿದ ಮರ್ವಿನ್ ಹೇಳಿದರು.
ಕಾರ್ಯಕ್ರಮದ ಪ್ರತೀ ಸಂಭಾಷಣೆಯೂ ಮನಸಿಗೆ ಮುದ ನೀಡುತ್ತಿದ್ದು ಜನರಿಗೆ ಅತ್ತಿತ್ತ ಕಣ್ಣು ಹಾಯಿಸಲು ಅವಕಾಶ ನೀಡಲಿಲ್ಲ. ತುಳು ಭಾಷಾ ಸೊಗಡಿನೊಂದಿಗೆ ಜನ ಸಾಮಾನ್ಯನ ಪಾತ್ರದಲ್ಲಿ ಜನರ ಮುಖದ ಮಂದಹಸವನ್ನು ಇಮ್ಮಡಿಗೊಳಿಸಿದರು.
- ವರದಿ: ರಕ್ಷಾ ಕೋಟ್ಯಾನ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ.
- ಚಿತ್ರ: ಅರ್ಪಿತ್ ಇಚ್ಛೆ