ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಮನೆ ಕಟ್ಟುವ ಕನಸಿನ ಜೊತೆಗೆ ಪರಿಸರದ ಕಾಳಜಿ ಸೇರಿಕೊಂಡರೆ ಪರಿಸರ ಸ್ನೇಹಿ ಮನೆಯನ್ನೇ ನಿರ್ಮಿಸಬಹುದಾಗಿದೆ. ಇಂಥದ್ದೇ ಮಾದರಿಯ ವಿನ್ಯಾಸವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಗಮನ ಸೆಳೆಯುತ್ತಿದೆ.
ಕಾರ್ಕಳದ ಕಲ್ಕಿ ಇಂಗ್ಲಿಷ್ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಇರ್ಬಿಸ್ ಸುಂದರವಾದ ಹಸಿರು ಮನೆಯ ಮಾದರಿಯನ್ನು ನಿರ್ಮಿಸಿದ್ದು, ಇದರೆಡೆಗೆ ಕುತೂಹಲ ತಳೆದು ಹಲವರು ಮಾಹಿತಿ ಪಡೆಯುತ್ತಿದ್ದಾರೆ.
ಮನೆಯ ಕಟ್ಟಡ ಒಳಗೊಳ್ಳುವ ಎಲ್ಲಾ ಪರಿಕರಗಳನ್ನೂ ಪರಿಸರಸ್ನೇಹಿಯಾಗಿಸಬಹುದು ಎಂಬ ಆತ್ಮವಿಶ್ವಾಸವನ್ನು ಈ ಮಾದರಿ ಮೂಡಿಸುತ್ತಿದೆ. ಎಲೆಕ್ಟ್ರಿಸಿಟಿ, ಗೋಡೆಯ ಬಣ್ಣ, ಸಿಮೆಂಟ್, ಸ್ಟೀಲ್ ಬಳಕೆಯ ಸಂದರ್ಭದಲ್ಲಿ ಪರಿಸರಸ್ನೇಹಿ ವಸ್ತುಗಳಿಗೇ ಆದ್ಯತೆ ನೀಡಬಹುದಾದ ಮಾದರಿ ಇದು. ಗೋಡೆಗೆ ಬಳಸಲಾಗುವ ಬಣ್ಣಕ್ಕೆ ರಸಾಯನಿಕ ಅಂಶವಿಲ್ಲದ ಉತ್ಪನ್ನಕ್ಕೇ ಆದ್ಯತೆ ನೀಡುವುದು ಹೇಗೆ ಎಂಬುದನ್ನು ಈ ಮಾದರಿ ತಿಳಿಸಿಕೊಡುತ್ತಿದೆ.
ಪರಿಸರಸ್ನೇಹಿ ಸೋಲಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಇಡೀ ಮನೆಯ ಎಲೆಕ್ಟ್ರಿಸಿಟಿ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಪರ್ಯಾಯ ಮಾರ್ಗವನ್ನೂ ಈ ಮಾದರಿ ತೂರಿಸುತ್ತದೆ. ಮನೆಗೆ ಪ್ರವೇಶದ್ವಾರದಲ್ಲಿ ಆರ್‌ಎಫ್‌ಐಡಿ ಸ್ಕ್ಯಾನ್ ಮಾಡುವ ಮೂಲಕ ಮನೆ ಅಂಗಣಕ್ಕೆ ಪ್ರವೇಶಿಸಬಹುದು. ಕತ್ತಲ ಸಮಯದಲ್ಲಿ ಕಾಲ್ನಡಿಗೆಯನ್ನು ಗಮನಿಸುವ ಸೆನ್ಸಾರ್ ಸ್ವಯಂಚಾಲಿತವಾಗಿ ವಿದ್ಯುತ್ ದೀಪ ಬೆಳಗಿಸುತ್ತದೆ. ಇನ್ನೂ ಸಾಪ್ಟ್ವೇರ್ ಅಪ್ಲಿಕೇಶನ್ ಧ್ವನಿಯ ಬಳಕೆಯ ಮೂಲಕ `ವಿದ್ಯುತ್ ದೀಪಗಳನ್ನು ಆನ್ ಮತ್ತು ಆಫ್ ಮಾಡಬಹುದಾಗಿದೆ. ಇದರಿಂದ ಸಮಯ ಹಾಗೂ ವಿದ್ಯುತ್‌ನ ಉಳಿತಾಯವು ಆಗಲಿದೆ. ಇದು ಪರಿಸರಕ್ಕೆ ಮಹತ್ವದ ಕೊಡುಗೆ ಎಂಬುದು ವಿದ್ಯಾರ್ಥಿ ಇರ್ಬಿಸ್‌ನ ಅಭಿಪ್ರಾಯ.
ಈ ಮಾದರಿ ವಿನ್ಯಾಸದಲ್ಲಿ ರೂಪುಗೊಳ್ಳುವ ಮನೆಯಿಂದ ಪರಿಕರಗಳಿಂದ ಪರಿಸರಕ್ಕೆ ಯಾವುದೇ ಅಪಾಯವಿಲ್ಲ. ಇವುಗಳಿಂದ ರಾಸಯನಿಕಗಳ ಬಿಡುಗಡೆಯು ಶೂನ್ಯ, ಬಹುತೇಕ ಪೇಂಟ್ಸ್, ಸಿಮೆಂಟ್ ಇವುಗಳಿಂದ ಅಸ್ತಮಾದಂತಹ ರೋಗ ಮನುಷ್ಯನಲ್ಲಿ ಕಂಡುಬರುವುದು ಸರ್ವೇಸಾಮಾನ್ಯ. ಆದರೆ ಇಲ್ಲಿ ಬಳಸಲಾಗಿರುವ ಪ್ರತಿ ವಸ್ತುಗಳು ಯಾವುದೇ ತರಹದ ಮಾಲಿನ್ಯಕಾರಕ ಸೂಸುವ ವಸ್ತುಗಳಲ್ಲ. ನೋಡಲು ಅದೇ ತೆರನಾಗಿ ಕಂಡುಬಂದರೂ ಈ ಬಗೆಯ ಮನೆ ನಿರ್ಮಾಣದ ಪ್ರಕಾರ ಪರಿಸರಸ್ನೇಹಿಯೂ ಆಗಿದೆ. ಮನುಷ್ಯನ ಸುಸ್ಥಿರ ಆರೋಗ್ಯಕ್ಕೂ ಪೂರಕವಾಗಿದೆ.
ಇನ್ನೂ ಗಿಡಗಳಿಗೆ ನೀರಿನಕೊರತೆಉಂಟಾದಾಗ, ಮಣ್ಣಿನಲ್ಲಿ ನೀರಿನತೇವಕಡಿಮೆಯಾಗದಂತೆ ನಿರ್ವಹಿಸಲು ಹೊಸ ಬಗೆಯ ಸೆನ್ಸಾರ್‌ನ್ನು ಅಳವಡಿಕೆ ಮಾಡಲಾಗಿದೆ. ಇದು ಸ್ವಯಂಚಾಲಿತವಾಗಿ ಮೋಟಾರ್ ಪಂಪ್‌ಆನ್ ಆಗುವ ಮೂಲಕ ನೀರಿನ ನಿರ್ವಹಣೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ.
- ವರದಿ: ರಂಜಿತ್‌ಕುಮಾರ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ