ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ವಿವಿಧ ರಾಜ್ಯಗಳ ಸಂಸ್ಕೃತಿ – ಸಾಂಸ್ಕೃತಿಕ ಪ್ರದರ್ಶನಕ್ಕೆ ಆಳ್ವಾಸ್ ವಿದ್ಯಾಸಂಸ್ಥೆಯ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ ಸಾಕಿಯಾಯಿತು.
ಈಸ್ಟರ್ನ್ ರೈಲ್ವೆಯ ರೋವರ್ಸ್ಸ್ ಮತ್ತು ರೇಂಜರ್ಸ್ಸ್ ಕಲಾವಿದರು ಸ್ವಾತಂತ್ರ್ಯ ಅಮೃತಮಹೋತ್ಸವದ ಸವಿ ನೆನಪಿನಲ್ಲಿ ಹೋರಾಡಿ ಮಡಿದ ವೀರ ಯೋಧರಿಗೆ ನೃತ್ಯದ ಮುಖೇನ ಗೌರವ ನಮನ ಸಲ್ಲಿಸಿದರು. ಶ್ವೇತ ವರ್ಣದ ವಸ್ತ್ರ ಮತ್ತು ತ್ರಿವರ್ಣ ಧ್ವಜದೊಂದಿಗಿನ ಅವರ ನೃತ್ಯ ಪ್ರದರ್ಶನ ಭಾರತ ಮಾತೆಯ ಪ್ರಭಾವಳಿಯನ್ನು ಪ್ರತಿಬಿಂಬಿಸಿತು.
ಡೊಳ್ಳು ಕುಣಿತದಲ್ಲಿ ಗಂಡು ಹೆಣ್ಣೆಂಬ ಬೇಧ ಭಾವವಿಲ್ಲದೆ ರಾಯಚೂರಿನ ವಿದ್ಯಾರ್ಥಿಗಳು ಕುಣಿದ ರೀತಿ ಪ್ರೇಕ್ಷಕರಲ್ಲೂ ತಾವೂ ಡೊಳ್ಳು ನುಡಿಸಬೇಕು ಎನ್ನುವ ಹುಮ್ಮಸ್ಸು. ಅದರಲ್ಲೂ ಆ ತಂಡದ ಮಾರ್ಗದರ್ಶಕರು ವೇದಿಕೆಯ ಬದಿಯಲ್ಲಿಯೇ ನಿಂತು ಕೈ ಸನ್ನೆಯಲ್ಲಿಯೇ ತಮ್ಮ ಮಕ್ಕಳಿಗೆ ಧೈರ್ಯ ತುಂಬಿದರು.
ಕರ್ನಾಟಕವೂ ಸೇರಿದಂತೆ ಹೊರ ರಾಜ್ಯಗಳ ಪ್ರಾದೇಶಿಕ ಸಂಸ್ಕೃತಿ ಬಿಂಬಿಸುವ ವಿಭಿನ್ನ ಉಡುಗೆ-ತೊಡುಗೆಗಳೊಂದಿಗೆ ಮಿಂಚುತ್ತಿದ್ದ ವಿದ್ಯಾರ್ಥಿಗಳು ಯಾವಾಗ ವೇದಿಕೆಗೆ ಹೋಗುತ್ತೇವೋ ಎಂದು ಕಾತುರದಿಂದ ಕಾಯುತ್ತಿರುವುದು ಒಂದೆಡೆಯಾದರೆ, ವೇದಿಕೆ ಎಡಭಾಗದಲ್ಲಿ ಕೆಲ ವಿದ್ಯಾರ್ಥಿಗಳ ಗುಂಪು ನೃತ್ಯದ ತಯಾರಿಯನ್ನು ಮಾಡುವ ಉತ್ಸಾಹದಲ್ಲಿದ್ದರು. ಹಿಮಾಚಲ ಪ್ರದೇಶ, ಒಡಿಸ್ಸಾ, ಈಸ್ಟರ್ನ್ ರೈಲ್ವೆ ಸೇರಿದಂತೆ ಕರ್ನಾಟಕದ ಪ್ರತೀ ಜಿಲ್ಲೆಯಿಂದ ತಲಾ ಒಂದು ತಂಡ ನೃತ್ಯ ವೈಭವದ ಮೂಲಕ ತಮ್ಮ ಪ್ರತಿಭಾ ಪ್ರದರ್ಶನಗೊಳಿಸಿದರು.
ಕುದುರೆ ಏರಿ ಸೂರ್ಯ ಬಂದಾನೆ’ ಎಂದು ಬಾಗಲಕೋಟೆಯ ವಿದ್ಯಾರ್ಥಿಗಳು ಕೋಲಾಟವಾಡಿದರು. ಒಂದೇ ನೃತ್ಯದಲ್ಲಿ ಬೇರೆ ಬೇರೆ ಹಾಡುಗಳನ್ನು ಹೊಂದಿಸಿ ಅವುಗಳಿಗೆ ತಕ್ಕನಾಗಿ ನರ್ತಿಸಿರುವುದು ಪತ್ರಿಭಾ ಪ್ರದರ್ಶನದ ಮೆರುಗನ್ನು ಹೆಚ್ಚಿಸಿತು. ಉಡುಪಿ, ಶಿವಮೊಗ್ಗ, ಬಳ್ಳಾರಿ, ರಾಮನಗರ, ಚಿಕ್ಕಮಗಳೂರು,ಕಲಬುರ್ಗಿ, ಬೆಳಗಾಂ, ಯಾದಗಿರಿ, ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನದಲ್ಲಿ ಸೈ ಎನಿಸಿಕೊಂಡರು.
- ವರದಿ: ರಕ್ಷಾ ಕೋಟ್ಯಾನ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ