ಶಿರೂರಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆ
ಬೈಂದೂರು: ಶಿರೂರು ಗ್ರಾಮದಲ್ಲಿನ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ನಿರ್ಗತಿಕರು, ಅಶಿಕ್ಷಿತ ಮಕ್ಕಳು ಹಾಗೂ ಇತರೆ ಫಲಾನುಭವಿಗಳಿಗೆ ನೂರಕ್ಕೆ ನೂರರಷ್ಟು ಸರಕಾರಿ ಸೌಲಭ್ಯಗಳು ದೊರೆತಾಗ ಮಾತ್ರ ಆದರ್ಶ ಗ್ರಾಮ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಶಿರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಈಗಾಗಲೇ ಶಿರೂರು ಗ್ರಾಮದ ಆಸ್ಪತ್ರೆ, ರಸ್ತೆ, ಸೇತುವೆ, ಕುಡಿಯುವ ನೀರು, ಮೀನುಗಾರಿಕಾ ಜಟ್ಟಿ ಮುಂತಾದವುಗಳಿಗೆ ಅನುದಾನ ಮಂಜೂರು ಮಾಡಲಾಗಿದ್ದು ಕೆಲಸ ಪ್ರಗತಿಯಲ್ಲಿದೆ. ಗ್ರಾಮದ ಜನರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಹೈನುಗಾರಿಕೆ, ಕೋಳಿ ಸಾಕಣೆಯಂತಹ ಸಣ್ಣ ಉದ್ದಿಮೆಗಳತ್ತ ಗಮನಹರಿಸಬೇಕು. ಮಹಿಳಾ ಸಂಘಟನೆ, ಯುವ ಸಂಘಟನೆಗಳ ಬಲವರ್ಧನೆಯಾಗಬೇಕು. ಇವೆಲ್ಲವೂ ಆದರ್ಶ ಗ್ರಾಮದ ಕನಸಿಗೆ ಪೂರಕವಾದವುಗಳು ಎಂದರು. ಇಂದಿನ ಸಭೆಯಲ್ಲಿ ಸಭೆಯಲ್ಲಿ ಚರ್ಚಿತವಾದ ವಿಚಾರಗಳು ಮುಂದಿನ ಸಭೆಯೊಳಗೆ ಕಾರ್ಯರೂಪಕ್ಕೆ ಬರಬೇಕು ಎಂದವರು ನಿರ್ದೇಶನ ನೀಡಿದರು. (ಕುಂದಾಪ್ರ ಡಾಟ್ ಕಾಂ ವರದಿ)
ಬಳಿಕ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಶಿರೂರಿನ ಮೂಲಭೂತ ಸೌಕರ್ಯಗಳನ್ನು ಪೂರೈಸುವ ದೃಷ್ಟಿಯಲ್ಲಿ ಇಂದಿನ ಸಭೆಯಲ್ಲಿ ಹಲವಾರು ವಿಚಾರಗಳು ಪ್ರಸ್ತಾಪವಾಗಿದೆ. ರಸ್ತೆಯ ಡಾಂಬರೀಕರಣ, ದಾರಿದೀಪ ಸಮಸ್ಯೆ ಬಗೆಹರಿಸಲು ವಿದ್ಯುತ್ ಇಲಾಖಾ ಸಿಬ್ಬಂದಿ ಹಾಗೂ ಉಪಕೇಂದ್ರ ಸ್ಥಾಪನೆಗೆ ಈಗಾಗಲೇ ಹಸಿರು ನಿಶಾನೆ ದೊರೆತಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ವೆಂಟೆಡ್ ಡ್ಯಾಂ ಸ್ಥಾಪಿಸಲು ಹಾಗೂ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಶೀಘ್ರ ಚಾಲನೆಗೊಳಿಸಲು ಜಿಲ್ಲಾಧಿಕಾರಿಯಿಂದ ಶೀಘ್ರ ಅನುಮತಿ ದೊರಕಿಸಿಕೊಡುವ ಕೆಲಸವಾಗಬೇಕಿದೆ ಎಂದರು. (ಕುಂದಾಪ್ರ ಡಾಟ್ ಕಾಂ ವರದಿ)
ಸಭೆಯಲ್ಲಿದ್ದ ಗ್ರಾಮಸ್ಥರು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡರು. ಅಧಿಕಾರಿಗಳು ಆ ಯೋಜನೆಯ ಪ್ರಗತಿಯ ಹಂತ ಹಾಗೂ ಕಾರ್ಯಯೋಜನೆಯ ಬಗ್ಗೆ ತಿಳಿಸಿದರು.
ಸಭೆಯಲ್ಲಿ ತಾ.ಪಂ ಸದಸ್ಯರಾದ ರಾಜು ಪೂಜಾರಿ, ರಮೇಶ ಗಾಣಿಗ ಕೊಲ್ಲೂರು, ಸಾವಿತ್ರಿ ಅಳ್ವೆಗದ್ದೆ, ಗ್ರಾ,ಪಂ ಉಪಾಧ್ಯಕ್ಷ ನಾಗೇಶ್ ಅಳ್ವೆಗದ್ದೆ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಜಿ. ಎಂ. ವಾಮದೇವ್, ಜಿಲ್ಲಾ ಆರೋಗ್ಯಾಧಿಕಾರಿ ರೋಹಿಣಿ, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ ಗೌರಯ್ಯ, ನೋಡೆಲ್ ಅಧಿಕಾರಿ ಚಂದ್ರಶೇಖರ ನಾಯ್ಕ್, ಕಾಂಗ್ರೆಸ್ ಮುಖಂಡ್ ಎಂ. ಎ. ಗಪೂರ್, ಶಿರೂರು ಪಂಚಾಯತ್‌ನ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗವೇಣಿ ನಿರೂಪಿಸಿದರು.
















