ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಕನ್ನಡ ಭಾಷೆಯ ಬಗ್ಗೆ ಹೊರಗಿನವರಿಗೆ ಕುತೂಹಲ ಇತ್ತು. ಆದರೆ ಮಹತ್ವ ನೀಡುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ರವಿ ಬಸ್ರೂರು ಎಂಬ ಯುವಕ ತನ್ನ ಕುಂದಾಪ್ರ ಕನ್ನಡಕ್ಕೆ ಮಹತ್ವ ಕೊಟ್ಟು ಹಾಡು, ಚಲನಚಿತ್ರ ನಿರ್ಮಾಣ ಮಾಡುವುದರೊಂದಿಗೆ ಕುಂದಾಪ್ರ ಕನ್ನಡ ಭಾಷೆಗೆ ಈ ಮಣ್ಣಿನ ಸಂಸ್ಕೃತಿಗೆ ಶೋಭೆ ತಂದುಕೊಟ್ಟಿರುವುದು ಖುಷಿಯ ಸಂಗತಿ ಎಂದು ಕರ್ನಾಟಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ನಡೆದ ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿದ ಅತಿ ಕಿರಿಯವರಾದ ರವಿ ಬಸ್ರೂರು ತಮ್ಮ ಜೀವನದಲ್ಲಿ ಇನ್ನಷ್ಟು ಸಾಧನೆಗಳ ಮೆಟ್ಟಲು ಏರುವಲ್ಲಿ ಈ ಪ್ರಶಸ್ತಿ ಪ್ರೇರಣೆ ನೀಡಲಿ. ಕೋ.ಮ. ಕಾರಂತರೆಂಬ ಶ್ರೇಷ್ಠ ಮಹನೀಯರ ಸ್ಮರಣೆ ಈ ಮೂಲಕ ಮಾಡಲು ಸಾಧ್ಯವಾಗಿರುವುದು ಸಂತೋಷದ ವಿಚಾರ ಎಂದರು.
ಸಂಗೀತ ನಿರ್ದೇಶಕ ‘ರವಿ ಬಸ್ರೂರು’ ಅವರಿಗೆ ಕೋ.ಮ. ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಬಳಿಕ ಅವರು ಮಾತನಾಡಿ, ದೇವ್ರ ಡಬ್ಬಿಗೆ ದುಡ್ಡ್ ಹಾಕ್ರೆ ನಾಂವ್ ವಾಪಾಸ್ ತೆಗ್ಗಿತ್ತಾ? ಹಾಂಗೆ ಕುಂದಾಪ್ರ ಭಾಷಿಗಾಗಿ ದುಡ್ಡ್ ಹಾಕ್ರೆ ಅದ ದೇವ್ರ ಡಬ್ಬಿ ದುಡ್ಡ್ ಹಾಕದ್ ಹಾಗೆ. ನಂಗೆ ಕುಂದಪ್ರ ಕನ್ನಡ ದೇವಸ್ಥಾನ. ಅದ್ರ ಫಲ ದೇವ್ರ ಕೊಟ್ಟೇ ಕೊಡ್ತ. ನಂಗೂ ಅದ್ರ ಫಲ ಸಿಕ್ಕೀತ್. ಕುಂದಾಪ್ರ ಭಾಷಿ ಯಾಕೆ ಬೇರೆಯವ್ರಿಗೆ ಅರ್ಥ ಆತ್ತಿಲ್ಲ? ತಮಿಳು, ತೆಲುಗು, ಮಲಯಾಳ ಭಾಷೆ ಅರ್ಥ ಆತ್ತ್ ಅಂಬ್ರ. ಕುಂದಾಪ್ರ ಭಾಷಿ ಯಾಕ್ ಆತ್ತಿಲ್ಲ. ಏನಾರೂ ಮಾಡಿ ಅರ್ಥ ಆಪು ಹಾಂಗ್ ಮಾಡ್ಕ್ ಅಂತ ಪ್ರಯತ್ನ ಮಾಡ್ದಾಗ, ಎಷ್ಟೋ ಜನ, ಇವ್ನಿಗೆ ಮಂಡಿ ಪೆಟ್ಟ್ ಅಂದ್ರ್. ಆದ್ರೆ ಕಡಿಗೂ ಫಲ ಸಿಕ್ತ. ನಮ್ಮ ಊರ ಬದಿ ಗೌರವ ಸಿಕ್ಕು ಹಾಂಗ್ ಆಯ್ಕ್ ಅಂತ ಸಾದ್ನಿ ಮಾಡ್ಕ್ ಅಂತ ಕನ್ಸ್ ಇದಿತ್. ಈಗ ಆ ಕನ್ಸ್ ನನ್ಸ್ ಆಯ್ತ್. ಕೋ.ಮ. ಕಾರಂತ ಪ್ರಶಸ್ತಿ ಸಿಕ್ಕಿದ್ದ್ದ್ ತುಂಬ ಖುಷಿ ಆಯ್ತ್. ನನ್ನ ಜವಾಬ್ದಾರಿ ಹೆಚ್ಚಾಯ್ತ್” ಎಂದರು.
ಕುಂದಾಪ್ರ, ಉಡುಪಿ ಜಿಲ್ಲೆ ಪರಿಸರದಲ್ಲಿ ನೂರಾರು ಮಂದಿ ಪ್ರತಿಭಾವಂತ ಯುವಕರಿದ್ದಾರೆ ಅವರ ಆಸಕ್ತಿಯ ಆಲೋಚನೆಗಳಿಗೆ ಬೆಂಬಲ ನೀಡಿ, ತುಂಬ ಮಂದಿ ಸಾಧನೆ ಮಾಡಿದವರೂ ಇದ್ದಾರೆ ಅವರನ್ನೂ ಬೆಳಕಿಗೆ ತನ್ನಿ. ಪ್ರಶಂಸೆ ಎನ್ನುವುದು ಬೇಕಾಗುತ್ತದೆ. ನಮ್ಮ ಪರಿಶ್ರಮಕ್ಕೆ ಪ್ರೋತ್ಸಾಹ ಸಿಗುವಂತೆ, ಸಮಾಧಾನ ಸಿಗುವಂತೆ ನಾವು ಪ್ರಯತ್ನಿಸಬೇಕು. ಕಾಲಕ್ಕೆ ತಕ್ಕಂತೆ ನಾವು ಬೆಳೆಯಬೇಕಾಗುತ್ತದೆ. ನಮ್ಮ ಕೆಲಸ ವೈಭವೀಕರಿಸಬೇಕಾಗುತ್ತದೆ. ಹಾಗೆ ಮಾಡಿದಾಗ ಗುರುತಿಸಲ್ಪಡುತ್ತೇವೆ. ನಮ್ಮ ಯುವಕರು ಯಾವಾಗಲೂ ಮತ್ತೊಬ್ಬರ ಬಗ್ಗೆ ಕೆಟ್ಟದ್ದು ಆಲೋಚಿಸಲು ಪುರುಸೊತ್ತು ಇಲ್ಲದಷ್ಟು ಕೆಲಸದಲ್ಲಿ ಮಗ್ನರಾಗುವಂತಾಗಬೇಕು ಎಂದು ಹೇಳಿದರು..
ಖ್ಯಾತ ಸಾಹಿತಿ ಡಾ. ರಂಜಿತ್ ಕುಮಾರ್ ಶೆಟ್ಟಿಯವರ 20 ಕಥೆಗಳು ಕೃತಿಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರು ಮಾತನಾಡಿ, ಕುಂದಾಪ್ರ ಕನ್ನಡ, ಭಾಷೆ, ಸಂಸ್ಕೃತಿ ಉಳಿದು ಬೆಳೆಯುವಂತಾಗಲೂ ಅಕಾಡೆಮಿ ಸ್ಥಾಪನೆ ಅಗತ್ಯವಾಗಿದ್ದು ಇಲ್ಲಿ ಉಪಸ್ಥಿತರಿರುವ ಮಂಜುನಾಥ ಭಂಡಾರಿಯವರೂ ಸೇರಿದಂತೆ ಜನಪ್ರತಿನಿಧಿಗಳು ಆ ಬಗ್ಗೆ ಗಂಭೀರ ಪ್ರಯತ್ನ ನಡೆಸಬೇಕು. ಕುಂದಪ್ರಭ ಈ ಭಾಷೆಯ ಅಭಿವೃದ್ಧಿಗೆ ಕುಂದಾಪುರದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದು, ಅಕಾಡೆಮಿ ಸ್ಥಾಪನೆಗೊಂಡರೆ ಹೆಚ್ಚು ಅನುಕೂಲವಾಗುತ್ತದೆ. ರವಿ ಬಸ್ರೂರುರಂತಹ ಯುವಕರಿಗೆ ಇನ್ನಷ್ಟು ಭಾಷೆ, ಸಂಸ್ಕೃತಿ ಬಗ್ಗೆ ಆಸಕ್ತಿ ಹುಟ್ಟುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಗಮಿಸಿದ್ದರು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ ಸ್ವಾಗತಿಸಿದರು. ಅಂಕಣಗಾರ ಕೋ. ಶಿವಾನಂದ ಕಾರಂತ ಕೋ.ಮ. ಕಾರಂತರ ಸ್ಮರಣೆ ಮಾಡಿದರು.
ನ್ಯೂಜಿಲ್ಯಾಂಡಿನ ಆಕ್ಲ್ಯಾಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಐದು ಚಿನ್ನದ ಪದಕ, ಬೆಳ್ಳಿ ಪದಕ ಪಡೆದ ಸತೀಶ್ ಖಾರ್ವಿಯವರನ್ನು ಶಾಸಕ ಮಂಜುನಾಥ ಭಂಡಾರಿ ಗೌರವಿಸಿದರು.
ಪ್ರತಿಭಾನ್ವಿತ ತಬಲಾ ಕಲಾವಿದರಾದ ಕೆ. ವಿಘ್ನೇಶ್ ಕಾಮತ್, ಶ್ರೀಧರ್ ಭಟ್, ಕೋಟೇಶ್ವರ ಹಾಗೂ ಗಾಯಕಿ ಧಾರಿಣಿ ಕೆ.ಎಸ್. ಅವರನ್ನು ಮಂಜುನಾಥ ಭಂಡಾರಿ ಗೌರವಿಸಿದರು.
ಡಾ| ಉಮೇಶ್ ಪುತ್ರನ್, ಡಾ| ಸದಾನಂದ ಭಟ್, ಕೆ. ರಮಾನಂದ ಕಾರಂತ, ಎಚ್. ಸೋಮಶೇಖರ ಶೆಟ್ಟಿ, ಹುಸೇನ್ ಹೈಕಾಡಿ, ಯು. ಸಂಗೀತಾ ಶೆಣೈ ಅತಿಥಿಗಳನ್ನು ಗೌರವಿಸಿದರು. ತೆಂಕನಿಡಿಯೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ, ಲೇಖಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಕಲಾವಿದ ವೇಣುಗೋಪಾಲ ಭಟ್ ಕೋಟೇಶ್ವರ ಹಾಗೂ ಗಣೇಶ್ ಗಂಗೊಳ್ಳಿ, ಅಶ್ವಿನಿ, ಮೇಘನಾ, ಪಾವನಾ ಅವರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಿತು. ಲೇಖಕ ಪಿ. ಜಯವಂತ ಪೈ ವಂದಿಸಿದರು.