ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶುದ್ಧವಾದ ನೀರು ಮತ್ತು ಹಿತ-ಮಿತವಾದ ಆಹಾರ ಸೇವನೆ, ಕಾಲಕ್ಕನುಗುಣವಾಗಿ ನಿದ್ರೆ ಮತ್ತು ದೇಹ ಪ್ರಕೃತಿಗೆ ಹೊಂದಿಕೊಳ್ಳುವ ವ್ಯಾಯಮದಿಂದ ರೋಗಮುಕ್ತರಾಗಬಹುದು. ಆಯುರ್ವೇದದ ದಿನಚರ್ಯೆ, ಋತುಚರ್ಯೆ ಹಾಗೂ ಯೋಗಚರ್ಯೆಗಳನ್ನು ಪಾಲಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಸಂಪೂರ್ಣ ಆರೋಗ್ಯಕರ ಜೀವನ ನಡೆಸಬಹುದು ಎಂದು ಕುತ್ಪಾಡಿ ಎಸ್‌ಡಿಎಂ ಆಯರ್ವೇದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಪೂಜಾರಿ ಹೇಳಿದರು.
ಗೋಳಿಹೊಳೆ ಮೂರ್ಕೈ ಶ್ರೀ ಮಹಿಷಮರ್ಧಿನಿ ಸಭಾಂಗಣದಲ್ಲಿ ಸೋಮವಾರ ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಗೊಳಿಹೊಳೆ ಶಾಖೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉಡುಪಿ ಸಹಯೋಗದೊಂದಿಗೆ ನಡೆದ ಉಚಿತ ಆಯುರ್ವೇದ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರದಲ್ಲಿ ಆರೋಗ್ಯ ಮಾಹಿತಿ ನೀಡಿದರು.
ನಿದ್ರೆ ಮನುಷ್ಯನ ಆಯಸ್ಸನ್ನು ನಿರ್ಧರಿಸುತ್ತದೆ. ಆಧ್ಯಾತ್ಮಿಕ ವ್ಯಾದಿ, ಆದಿಭೌತಿಕ ವ್ಯಾಧಿ ಹಾಗೂ ಆದಿದೈವಿಕ ವ್ಯಾದಿಗಳೇ ತಾಪತ್ರಯಗಳು. ನಮಗೆ ನಮ್ಮ ಜೀವನದ ಕಲ್ಪನೆಯೊಂದಿಗೆ ದೈವಬಲವೂ ಬೇಕು. ಪ್ರಕೃತಿಯನ್ನು ಗೌರವಿಸುವುದು ಜಲವನ್ನು ರಕ್ಷಣೆ ಮಾಡುವ ಜತೆಗೆ ಸಾಮಾಜಿಕ ನಿಯಮ ಪಾಲನೆ ನಮ್ಮಲ್ಲರ ಕರ್ತವ್ಯ ಎಂದು ಅರಿತು ನಿರ್ವಹಣೆ ಮಾಡಿದ್ದಲ್ಲಿ ಆರೋಗ್ಯ ನಿಯಂತ್ರಣವಾಗುತ್ತದೆ. ಕುಟುಬಂವೇ ನಮ್ಮ ಜಗತ್ತಾಗಿದ್ದು, ವ್ಯಕ್ತಿ ಕೌಟುಂಬಿಕ ನೆಲೆಯಲ್ಲಿ ಬದಲಾಗಬೇಕು. ಇಂದಿನ ದಿನಗಳಲ್ಲಿ ಒತ್ತಡದ ಬದುಕು, ಆಧುನಿಕ ಆಹಾರ ಪದ್ಧತಿ ಎಲ್ಲವೂ ಕೂಡ ಹೊಸಹೊಸ ಕಾಯಿಲೆಗಳಿಗೆ ಕಾರಣವಾಗಿದೆ. ಈ ವಿಧಾನವನ್ನು ಬದಲಿಸಿಕೊಂಡರೆ ರೋಗಮುಕ್ತ ಜೀವನ ನಡೆಸಬಹುದು. ಈ ನೆಲೆಯಲ್ಲಿ ಆಯುರ್ವೇದ ಪದ್ಧತಿಯನ್ನು ಅರಿತು ಅಳವಡಿಸಿಕೊಂಡು ಅನುಸರಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಘಗಳು ಆರ್ಥಿಕ ವ್ಯವಹಾರಗಳಿಗೆ ಮೀಸಲಾಗಿರುವ ಹೊತ್ತಿನಲ್ಲಿ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಜನರಿಗೆ ಆರೋಗ್ಯ ಮಾಹಿತಿ ಹಾಗೂ ತಪಾಸಣಾ ಶಿಬಿರವನ್ನು ಆಯೋಜಿಸಿ ತಮ್ಮ ಸೇವಾ ಬದ್ಧತೆಯನ್ನು ತೋರ್ಪಡಿಸಿದ್ದಾರೆ. ಇದು ನಿಜಕ್ಕೂ ಶ್ಲಾಘನಾರ್ಹ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಗೋಳಿಹೊಳೆ ಗ್ರಾಪಂ ಅಧ್ಯಕ್ಷೆ ಇಂದಿರಾ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ಜನ್ಮನೆ ರತ್ನಾಕರ ಶೆಟ್ಟಿ, ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್, ಸಿಇಒ ಕಿಟ್ಟಣ್ಣ ರೈ ಮತ್ತು ನಿರ್ದೇಶಕರು ಇದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.