ಗಂಗೊಳ್ಳಿ: ಕರ್ನಾಟಕ ಸರಕಾರವು ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಗಣನೀಯ ಸಾಧನೆಗೈದ ಯುವಜನ ಸಂಘಗಳಿಗೆ ನೀಡಲಾಗುತ್ತಿರುವ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಆಯ್ಕೆಯಾಗಿದೆ.
2013-144ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರದಾನ ಮಾಡಲು ಸರಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. 1984ರಲ್ಲಿ ಸ್ಥಾಪನೆಗೊಂಡ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಅನೇಕ ಕ್ರೀಡೋತ್ಸವ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ನಡೆಸಿರುವುದಲ್ಲದೆ ಸುಮಾರು 5 ಸಾವಿರ ಜನರಿಗೆ ಕೊಂಕಣಿ ಮಣಿಪಾಲ ಆರೋಗ್ಯ ಕಾರ್ಡ್ ವಿತರಿಸಿದೆ. ಜಿಲ್ಲಾ ಮಟ್ಟದ ಯುವಜನೋತ್ಸವ, 9 ಬಾರಿ ನಾಡಿ ಪರೀಕ್ಷೆ ಶಿಬಿರ, 9 ಬಾರಿ ಯೋಗ, ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯಾ ಶಿಬಿರ ಸಹಿತ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು, ಪ್ರತಿವರ್ಷ ಗುರುಜ್ಯೋತಿ ವಿದ್ಯಾನಿಧಿ ಯೋಜನೆ ಮೂಲಕ ವಿದ್ಯಾರ್ಥಿವೇತನ ವಿತರಣೆ ಮಾಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿತ್ತು. ಸಂಸ್ಥೆಯ ಉತ್ತಮ ಕಾರ್ಯಕ್ರಮಗಳಿಗೆ ಉಡುಪಿ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯು ೨೦೧೨-೧೩ನೇ ಸಾಲಿಗೆ ಜಿಲ್ಲಾ ಯುವ ಸಾಂಘಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.









